ಮಸ್ಕಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಶನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯು, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಹಿಂಪಡೆಯದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಭೂ ನ್ಯಾಯ ಮಂಡಳಿ ನಾಮ ನಿರ್ದೇಶನ ಸದಸ್ಯ ಆನಂದಪ್ಪ ನಂಜಲದಿನ್ನಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಕಾಯ್ದೆಯು ಉದ್ಯೋಗದ ದಿನಗಳನ್ನು ೧೦೦ ರಿಂದ ೧೨೫ ಕ್ಕೆ ಏರಿಸಿದರೂ, ಯೋಜನೆ ಅನುಷ್ಠಾನದಲ್ಲಿ ಕೇಂದ್ರದ ನಿಗದಿತ ಅನುದಾನದ ಖಾತ್ರಿಯಿರುವುದಿಲ್ಲ. ಕೇಂದ್ರ ಸರ್ಕಾರದ ಹಣಕಾಸು ಹೊಣೆಗಾರಿಕೆಯನ್ನು ಕೇಂದ್ರವು ೬೦% ಮಾತ್ರ ನೀಡುತ್ತದೆ. ಉಳಿದ ೪೦% ಹಣವನ್ನು ರಾಜ್ಯ ಸರ್ಕಾರ ನೀಡಬೇಕೆಂಬ ಹೊಸ ಕಾಯ್ದೆ ಜಾರಿ ಮಾಡಿದ್ದಾರೆಂದು ಆರೋಪಿಸಿದರು.
ನಂತರ ಪ್ರಚಾರ ಸಮಿತಿ ಅಧ್ಯಕ್ಷ ಜಯಪ್ಪ ಮೆದಿಕಿನಾಳ ಮಾತನಾಡಿ ಉದ್ಯೋಗ ಭರವಸೆ ಕಾನೂನು ಕೇವಲ ಒಂದು ಕಲ್ಯಾಣ ಕ್ರಮವಲ್ಲ. ಇದೊಂದು ಐತಿಹಾಸಿಕ, ವಿಶ್ವಮಾನ್ಯತೆ ಪಡೆದ, ಹಕ್ಕು-ಆಧಾರಿತ ಶಾಸನವಾಗಿದೆ. ಮಹಾತ್ಮಾ ಗಾಂಧೀಜಿಯ ಹೆಸರನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಪ್ರಸ್ತುತ ಕಾನೂನಿನಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರ, ಹೊಸ ಕಾಯ್ದೆಯ ನೈತಿಕ ಅಧಿಕಾರವನ್ನು ದುರ್ಬಲಗೊಳಿಸಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನರೇಗಾ ಹೊಸ ಕಾನೂನನ್ನು ಕೂಡಲೇ ಹಿಂಪಡೆಯದಿದ್ದರೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸಪ್ಪ ಜಂಗಮರಹಳ್ಳಿ, ಸುರೇಶ ಅಂತರಗಂಗಿ, ಸೋಮನಾಥ ಮಾಟೂರು ಸೇರಿದಂತೆ ಇನ್ನಿತರರಿದ್ದರು. ಮಸ್ಕಿ ಪತ್ರಿಕಾ ಭವನದಲ್ಲಿ ಕಾಂಗ್ರೆಸ ಮುಖಂಡರು ಬುಧವಾರ ಪತ್ರಿPಗೋಷ್ಠಿ ನಡೆಸಿದರು.

