ಮೈಲಾಪುರ ಅಗಸಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಅಲಂಕೃತವಾದ ಸಾರೋಟ ಮಾದರಿಯ ತೆರೆದ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಅವರೊಂದಿಗೆ ಪತ್ನಿ ಹಾಗೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅವರು ಆಸಿನರಾದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ಚಿಗರಹಳ್ಳಿಯ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ಹಲಗೆ ವಾದನ, ಬ್ಯಾಂಡ್ ಬಾಜಾ ಮತ್ತಿತರೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಾಗಿತು. ತಲೆಯ ಮೇಲೆ ಬಿಂದಿಗೆ ಹೊತ್ತು, ಸಾಂಪ್ರದಾಯಿಕ ಧಿರಿಸಿನಲ್ಲಿ ಲಂಬಾಣಿ ಕಲಾವಿದರು ಹಲಗೆ ವಾದನಕ್ಕೆ ನೃತ್ಯ ಮಾಡುತ್ತಾ ಸಾಗಿದರು.
ಸಮ್ಮೇಳನ ಅಧ್ಯಕ್ಷರು ಬಸವಣ್ಣನ ಭಾವಚಿತ್ರವನ್ನು ಹಿಡಿದು ಕುಳಿತರು. ಸ್ವಲ್ಪ ದೂರ ಸಾಗುತ್ತಿದ್ದಂತೆ ಸಂಘಟಕರು ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರು ಒಟ್ಟಾಗಿರುವ ಫೋಟೊವನ್ನು ನೀಡಿದರು. ಮೂವರು ಮಹನೀಯರ ಫೋಟೊವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮಾರ್ಗ ಮಧ್ಯದಲ್ಲಿ ಸಮ್ಮೇಳನ ಅಧ್ಯಕ್ಷರ ಆಪ್ತರು, ಬೆಂಬಲಿಗರು ಸನ್ಮಾನಿಸಿ ಅಭಿನಂದನೆಯೂ ಸಲ್ಲಿಸಿದರು.
ಶಾಲೆಯ ಮಕ್ಕಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಮ್ಮೇಳನದ ಸಂಘಟಕರು, ಸ್ವಯಂ ಸೇವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯು ಮೈಲಾಪುರ ಅಗಸಿಯಿಂದ ಹೊರಟು ದುರ್ಗಾ ದೇವಿ ದೇವಸ್ಥಾನ ಪ್ರವೇಶದ್ವಾರ, ಛತ್ರಪತಿ ಶಿವಾಜಿ ಸರ್ಕಲ್, ಗಾಂಧಿ ವೃತ್ತ ಮೂಲಕ ಹಾದು ವೀರಶೈವ ಕಲ್ಯಾಣ ಮಂಟಪ ಮುಂಭಾಗದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ಮುಖಂಡರಾದ ವಿಶ್ವಾನಾಥ ಸಿರವಾರ, ಮರೆಪ್ಪ ಚಟ್ಟರಕಿ, ಭೀಮಣ್ಣ ಮೇಟಿ, ಹಣುಮೇಗೌಡ ಮರಕಲ್, ಎ.ಸಿ. ಕಾಡ್ಲೂರ್, ಭೀಮರಾವ ಲಿಂಗೇರಿ, ಎಸ್.ಎಸ್. ನಾಯಕ, ರವೀಂದ್ರ ಶಾಬಾದಿ, ಶಿವರಂಜನ್ ಸತ್ಯಂಪೇಟೆ, ಅಶೋಕ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಾದಗಿರಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ನೃತ್ಯದ ಮಾಡಿದ ಲಂಬಾಣಿ ಕಲಾವಿದರು


