ಸಿಂಧನೂರು : ಡಿ 29 ತಾಲ್ಲೂಕು ಆರೋಗ್ಯ ಕಚೇರಿಯ ಮಾರ್ಗದರ್ಶನದಲ್ಲಿ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಾಯಿ ಕಚ್ಚು ಮತ್ತು ಹಾವು ಕಚ್ಚು ತಡೆ ಹಾಗೂ ಚಿಕಿತ್ಸೆ ಕುರಿತು ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಜಾಗೃತಿ ಉಪನ್ಯಾಸವನ್ನು ಶ್ರೀ ನಿಖಿಲ್ ಮಹಾಮಾರಿ ತಜ್ಞರು, ತಾಲ್ಲೂಕು ಆರೋಗ್ಯ ಕಚೇರಿ ಸಿಂಧನೂರು ಅವರು ನಡೆಸಿಕೊಟ್ಟರು.
ಉಪನ್ಯಾಸದಲ್ಲಿ ಅವರು ನಾಯಿ ಕಚ್ಚು ಹಾಗೂ ಹಾವು ಕಚ್ಚಿನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ತಕ್ಷಣದ ಪ್ರಥಮ ಚಿಕಿತ್ಸೆ, ತಪ್ಪಿಸಬೇಕಾದ ಅನೈಜ್ಞಾನಿಕ ಪದ್ಧತಿಗಳು, ಸಮಯಕ್ಕೆ ಸರಿಯಾಗಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳುವ ಅಗತ್ಯತೆ ಮತ್ತು ಲಸಿಕೆ/ಆ್ಯಂಟಿ ವೆನಮ್ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ಸಾರ್ವಜನಿಕರು ಭಯಪಡದೇ, ಜಾಗೃತಿಯಿಂದ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅದೇ ಕಾರ್ಯಕ್ರಮದಲ್ಲಿ ಡೆಂಗ್ಯೂ ಜಾಗೃತಿ ಉಪನ್ಯಾಸವನ್ನು ಅಬ್ದುಲ್ ರಹಿಮಾನ್ ಹಣಗಿ ಅವರು ನೀಡಿದರು. ಡೆಂಗ್ಯೂ ರೋಗದ ಹರಡುವ ವಿಧಾನ, ಲಕ್ಷಣಗಳು, ಅಪಾಯ ಸೂಚನೆಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಕಟ್ಟುವುದರ ಮೂಲಕ ತಡೆಯುವುದು ಹಾಗೂ ಜ್ವರ ಕಾಣಿಸಿಕೊಂಡ ಕೂಡಲೇ ಆರೋಗ್ಯ ಕೇಂದ್ರಕ್ಕೆ ವರದಿ ಮಾಡುವ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಹಾಗೂ ಪರಿಚಯವನ್ನು ಲಾಜರ್ ಸಿರಿಲ್ ಜಿ ಅವರು ನೀಡಿದರು. ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ತಿಳಿಸಿ, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಲ್ಲಿ ನಾಯಿ ಕಚ್ಚು, ಹಾವು ಕಚ್ಚು ಹಾಗೂ ಡೆಂಗ್ಯೂ ಕುರಿತು ಅರಿವು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯ ಅಧಿಕಾರಿಗಳಾದಂತ ಶ್ರೀ ನಿಖಿಲ್ ಹೊಸಮನಿ ಎಂಡೊಮೊಲಜಿಸ್ಟ್ ರೋಗವಾಹಕ ಆಶ್ರಿತ ಕಾರ್ಯಕ್ರಮದ ಮೇಲ್ವಿಚಾರಕರು ಆದ ಶ್ರೀ ಹಣಗಿ ಮತ್ತು ಸನ್ ರೈಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಇರ್ಷಾದ್ ಕೆ ಅತ್ತಾರ್ ಹಾಗೂ ಎಲ್ಲಾ ಉಪನ್ಯಾಸಕರುಗಳು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕುವೆಂಪು ಅವರ ಆದರ್ಶಗಳನ್ನು ಸ್ಮರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *