ಮಾನ್ವಿ : ಪಿ.ಯು. ಹಂತದಲ್ಲೇ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನೇತಾಜಿ ಕೆರಿಯೆರ್ ಅಕ್ಯಾಡೆಮಿಯನ್ನು ಆರಂಭಿಸಲಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ. ನರಸಿಂಹ ಅವರು ಹೇಳಿದರು.
ಅವರು ಇಂದು ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸಲಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಇದು ಸಂಸ್ಥೆಯ ಬಹುದಿನಗಳ ಕನಸಾಗಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಅಕ್ಯಾಡೆಮಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಅನುಭವಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ಈಗಾಗಲೇ ವಿವಿಧ ಇಲಾಖೆಗಳಲ್ಲಿಉದ್ಯೋಗ ಪಡೆದ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ತರಗತಿಗಳು ನಡೆಯಲಿದ್ದು, ಈ ತರಬೇತಿ ಸಂಪೂರ್ಣ ಉಚಿತವಾಗಿದೆ. ಮಾನ್ವಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಿ.ಯು. ಮತ್ತು ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಎಸ್.ಡಿ.ಎ., ಎಫ್.ಡಿ.ಎ., ಶಿಕ್ಷಕ, ಉಪನ್ಯಾಸಕ, ಬ್ಯಾಂಕಿಂಗ್, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆಡಳಿತಾತ್ಮಕ ಇಲಾಖೆಗಳ ಕ್ಲಾಸ್–ಒನ್ ಹಾಗೂ ಕ್ಲಾಸ್–ಟು ಸೇರಿ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸಮಗ್ರ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ. ವಿಜಯಲಕ್ಷಮಿ, ಸಹ ಕಾರ್ಯದರ್ಶಿ ಕೆ. ರವಿವರ್ಮ, ತರಬೇತಿದಾರರಾದ ಹೆಚ್.ಟಿ. ನಾಯಕ, ಹುಸೇನ್ ಭಾಷಾ, ಆಂಜನೆಯ್ಯ ಹಾಗೂ ಉಪನ್ಯಾಸಕರಾದ ಆರೀಫ್, ಚಂದ್ರು ಜಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

