ನೈಜ್ಯ ದೆಸೆ : ಲಿಂಗಸುಗೂರು: ಡಿ 27
ತಾಲೂಕಿನ ಹಟ್ಟಿ ಚಿನ್ನದ ಗಣಿ–ಪಾಮನಕಲ್ಲೂರು ಮುಖ್ಯ ರಸ್ತೆಯಲ್ಲಿ ನಡೆದ ಸ್ಟಾಫ್ ನರ್ಸ್ ಕುಮಾರಿ ಜ್ಯೋತಿ (32) ಅವರ ಅನುಮಾನಾಸ್ಪದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು .
ದಿನಾಂಕ 22-12-2025 ರಂದು ನಡೆದ ಈ ಘಟನೆಯ ಕುರಿತು ಮಾತನಾಡಿದ ದಲಿತ ಮುಖಂಡರು, ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟಾಫ್ ನರ್ಸ್ ಜ್ಯೋತಿ ಅವರು ಸಾವಿರಾರು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಜವಾಬ್ದಾರಿಯುತ ಸ್ಟಾಫ್ ನರ್ಸ್ ಆಗಿದ್ದು, ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುವದಕ್ಕೆ ಸಾಧ್ಯತೆಯೇ ಇಲ್ಲ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
21-12-2025 ರ ರವಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜ್ಯೋತಿ ಮನೆಯಿಂದ ಹೊರಟಿದ್ದು, ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದಾಳೆ. ಆದರೆ ಸೋಮವಾರ ಮಧ್ಯಾಹ್ನದವರೆಗೂ ಮನೆಗೆ ಬಾರದೆ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಬಳಿಕ ರಸ್ತೆಯ ಪಕ್ಕದಲ್ಲಿ ನಿಂತಿದ್ದ ರೋಡ್ ರೋಲರ್ ವಾಹನಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಜ್ಯೋತಿ ಶವ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು, ಇದು ಆತ್ಮಹತ್ಯೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ದಲಿತ ಮುಖಂಡರ ಪ್ರಕಾರ, ಜ್ಞಾನಮೂರ್ತಿ ತಂದೆ ಯಂಕೋಬ ಕಳೆದ 2–3 ವರ್ಷಗಳಿಂದ ಜ್ಯೋತಿಯನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ, ಆಕೆಯನ್ನು ಮನೆಗೆ ಕರೆಸಿ ಅವಾಚ್ಯವಾಗಿ ನಿಂದಿಸಿ, ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದಾರೆ. ನಂತರ ಕುಟುಂಬದವರು ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ರೋಡ್ ರೋಲರ್‌ಗೆ ನೇತು ಹಾಕಿರುವ ಸ್ಥಿತಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅನ್ಯಜಾತಿಯ ಯುವತಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿಯನ್ನು ಸ್ವಂತ ತಂದೆಯೇ ಕೊಲೆ ಮಾಡಿದ ಘಟನೆ ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಮರ್ಯಾದೆ ಹತ್ಯೆ ಹಾಗೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ತಲೆತಗ್ಗಿಸುವ ಸಂಗತಿ ಎಂದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 13,154 ಕ್ಕೂ ಹೆಚ್ಚು ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಆದ್ದರಿಂದ ಜ್ಯೋತಿ ಸಾವು ಹಾಗೂ ಹುಬ್ಬಳ್ಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎರಡೂ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ
ರುದ್ರಪ್ಪ ಬ್ಯಾಗಿ (ಮಾಜಿ ಪುರಸಭೆ ಸದಸ್ಯ),
ಮೋಹನ್ ಗೋಸ್ಲೆ (SC/ST ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯ),
ರಮೇಶ್ ಗೋಸ್, ಪ್ರಭುಲಿಂಗ ಮ್ಯಾಗಮನಿ, ಕಿರಣಕುಮಾರ ಚಿಕ್ಕಹೆಸರೂರು, ಶಿವಣ್ಣ ಮಾಚನೂರು, ಪ್ರದೀಪ್ ಮುತ್ತು, ಆಂಜನೇಯ ಭಂಡಾರಿ, ಚಿನ್ನಪ್ಪ ರಾರಾವಿ, ಅಮರೇಶ ಮ್ಯಾಗೇರಿ, ಹನುಮಂತ ಮುದಗಲ್ ಸೇರಿದಂತೆ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.

