ಮಾನ್ವಿ : ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ–ನಗರಾಭಿವೃದ್ಧಿ ಕೋಶ, ರಾಯಚೂರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರಾಯಚೂರು ಹಾಗೂ ಪಟ್ಟಣ ಪಂಚಾಯತ್ ಕಾರ್ಯಾಲಯ, ಸಿರವಾರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಜುಬೇದ ಮಾತನಾಡಿ, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ವಿಕಲಚೇತನರು ಸಮಾಜದ ಮುಖ್ಯಧಾರೆಯಲ್ಲಿ ಗೌರವಪೂರ್ಣವಾಗಿ ಬದುಕಲು ಅಗತ್ಯವಾದ ಬೆಂಬಲವನ್ನು ಎಲ್ಲಾ ಇಲಾಖೆಗಳು ಸಮನ್ವಯದಿಂದ ಒದಗಿಸಬೇಕು ಎಂದು ತಿಳಿಸಿದರು. ವಿಕಲಚೇತನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಪಂಚಾಯಿತಿ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಕಾರ್ಯದರ್ಶಿ ದೇವೇಂದ್ರಪ್ಪ, ಬಸವರಾಜ, ಸಂಕಲ್ಪ ವಿಕಲಚೇತನರ ಒಕ್ಕೂಟದ ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ, ಯಲ್ಲಪ್ಪ ದೊತರಬಂಡಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ನಿರ್ಮಲಾ ಸೇರಿದಂತೆ ಅನೇಕ ವಿಕಲಚೇತನರು ಉಪಸ್ಥಿತರಿದ್ದು, ತಮ್ಮ ಸಮಸ್ಯೆಗಳು ಹಾಗೂ ಅಗತ್ಯಗಳ ಬಗ್ಗೆ ಚರ್ಚಿಸಿದರು. ಸಭೆಯ ಮೂಲಕ ವಿಕಲಚೇತನರ ಕಲ್ಯಾಣಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

