ಮಾನ್ವಿ: ಒತ್ತಡದ ಜೀವನ ಶೈಲಿಯಿಂದಾಗಿ ಬಹುತೇಕರಲ್ಲಿ ಒಂದಲ್ಲಾ ಒಂದು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಪ್ರಥಮ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚಿನ ಅಪಾಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು.

ಪಟ್ಟಣದ ಬ್ರಾಹ್ಮಣವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾನವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರು ಎರೆದು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ವಿಶೇಷವಾಗಿ ಮಾನ್ವಿ ತಾಲೂಕಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಶಾಲೆಗಳಲ್ಲಿ ಉಪಯುಕ್ತವಾದ ಪ್ರಮುಖ ಮೂರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಥಮವಾಗಿ ಶಾಲೆಗಳಲ್ಲಿ ವಿಜ್ಞಾನ ವಸ್ತುಗಳ ಪ್ರದರ್ಶನ ಮತ್ತು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ವಿಷಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ದೈಹಿಕ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಾಗಾರ ದಂತಹ ಮಹತ್ವದ ಕಾರ್ಯಕ್ರಮಗಳನ್ನು ನೀಡುವ ಮೂಲಕ‌ ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಎಂದು ಶ್ಲಾಘಿಸಿದರು. ಪ್ರಸ್ತುತ ದಿನಗಳಲ್ಲಿ ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವದು ಅಗತ್ಯವಿದೆ.ವಿಶೇಷವಾಗಿ ದೈಹಿಕ ಶಿಕ್ಷಕರಿಗೆ ಇದರ ಮಾಹಿತಿ ತುಂಬಾ ಉಪಯುಕ್ತವಾಗಿದ್ದು, ಕ್ರೀಡೆಗಳ ಸಮಯದಲ್ಲಿ ಶಾಲಾ ಮಕ್ಕಳಲ್ಲಿ ಉಂಟಾಗುವ ಗಾಯಗಳು, ತಲೆ ಸುತ್ತು ವಿವಿಧ ಸಂದರ್ಭದಲ್ಲಿ ಮಕ್ಕಳಿಗೆ ಪ್ರಥಮ ಚಿಕಿತ್ಸೆಗಳ ವಿಧಾನ ಅಗತ್ಯವಾಗಿದೆ. ಇದರ ಜ್ಞಾನ ಮಕ್ಕಳಿಗೂ ಅಗತ್ಯವಿದೆ. ಪ್ರಸ್ತುತ ಒತ್ತಡದ ಜೀವನದಲ್ಲಿ ಕಾಯಿಲೆಗಳು ಸಹಜವಾಗಿದ್ದೂ ಪ್ರಥಮ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚಿನ ಅಪಾಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ನಂತರ ಆರೋಗ್ಯ ಅಧಿಕಾರಿಗಳಾದ ಡಾ.ಶ್ರೀಧರ, ಡಾ.ಅಂಬಿಕಾ ಅವರು ಆಹಾರ ವಿಧಾನಗಳ ಮಹತ್ವ ಮತ್ತು ಅಗತ್ಯತೆ ಹಾಗೂ ಆಕಸ್ಮಿಕವಾಗಿ ಜರುಗುವ ಬೆಂಕಿಯಿಂದ ಸುಟ್ಟಗಾಯ, ತಲೆ ಸುತ್ತು, ಮೂರ್ಛೆ ಹೋಗುವಿಕೆ, ಕ್ರೀಡಾ ಸಮಯದಲ್ಲಿನ ಗಾಯಗಳು ಇತ್ಯಾದಿಗಳಿಗೆ ಅನುಸರಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನಗಳು ಬಗ್ಗೆ ಕಾರ್ಯಾಗಾರದಲ್ಲಿ ಸವಿವರವಾಗಿ ತಿಳಿಸಿಕೊಡಲಾಯಿತು.
ನಂತರ ಕಾರ್ಯಾಗಾರದಲ್ಲಿ ವೈದ್ಯ ಅಧಿಕಾರಿಗಳ ಡಾ.ಅಂಬಿಕಾ ಹಾಗೂ ಆರ್ಬಿಎಸ್ಕೆ ವೈದ್ಯ ಅಧಿಕಾರಿ ಡಾ.ಶ್ರೀಧರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ದೈ.ಶಿಕ್ಷಕರಾದ ಮಾರುತಿ, ನೂಡಲ್ ಅಧಿಕಾರಿ ಸಿದ್ಧಲಿಂಗೇಶ್ವರ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ಬಾಗೇವಾಡಿ, ಮೌನೇಶ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಧೈಹಿಕ ಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *