ಸಿಂಧನೂರು : ಆರ್.ಎಚ್. ನಂಬರ್ ವನ್ (ಬರ್ಮಾ ಕ್ಯಾಂಪ್) ವ್ಯಾಪ್ತಿಯ ಆರೋಗ್ಯ ಮಾತೆ ದೇವಾಲಯ, ಬರ್ಮಾ ಕ್ಯಾಂಪ್ ನಲ್ಲಿ ಕ್ರಿಸ್ತ ಜಯಂತಿಯನ್ನು ಭಕ್ತಿಭಾವ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ರಮವನ್ನು ಧರ್ಮ ಕೇಂದ್ರದ ಗುರುಗಳಾದ ಫಾದರ್ ರೆವರೆಂಡ್ ಪಿ.ಜೆ. ಹೃದಯ ರಾಜ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದ್ದು, ಕ್ರಿಸ್ತ ಯೇಸುವಿನ ಜನನದ ಮಹತ್ವವನ್ನು ಸಾರುವ ಗೋಧಲಿ ಪ್ರಾರ್ಥನೆ ಹಾಗೂ ವಿಶೇಷ ಕ್ರಿಸ್‌ಮಸ್ ಸಂದೇಶವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಪಾಲನಾ ಸಮಿತಿ ಸದಸ್ಯರು, ಭಕ್ತರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೀತಿ, ತ್ಯಾಗ, ಸೇವೆ ಮತ್ತು ಸಹೋದರತ್ವದ ಸಂದೇಶವನ್ನು ಮನಗಂಡರು. ಕ್ರಿಸ್ತ ಯೇಸುವಿನ ಜನನವು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಮಹತ್ವದ ಸಂದೇಶವಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ ಎಂದು ಫಾದರ್ ರೆವರೆಂಡ್ ಪಿ.ಜೆ. ಹೃದಯ ರಾಜ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಬಾದರ್ಲಿ ಹಂಪನಗೌಡ ಅವರು ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕಳುಹಿಸಿ, ಬರ್ಮಾ ಕ್ಯಾಂಪ್ ಪ್ರದೇಶದಲ್ಲಿ ಎಲ್ಲಾ ಧರ್ಮಗಳ ನಡುವೆ ಇರುವ ಸಹಬಾಳ್ವೆ, ಪರಸ್ಪರ ಗೌರವ ಮತ್ತು ಸೌಹಾರ್ದತೆಯನ್ನು ಇನ್ನಷ್ಟು ಬಲಪಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೆಹಮದ್ ಪಾಷಾ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಆರ್.ಎಚ್. ನಂಬರ್ ವನ್ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು, ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಲಾಜರ್ ಸಿರಿಲ್ ಅವರು ಕ್ರಿಸ್ತ ಜಯಂತಿಯ ಅಂಗವಾಗಿ ಕ್ರೈಸ್ತ ಸಮುದಾಯದ ಎಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಕ್ರಿಸ್‌ಮಸ್ ಹಬ್ಬವು ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಅವರು ಆಶಿಸಿದರು.
ಕ್ರಿಸ್ತ ಜಯಂತಿ ಆಚರಣೆ ಭಕ್ತರ ಹೃದಯಗಳಲ್ಲಿ ಸಂತಸ, ಭರವಸೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಮೂಡಿಸಿ, ಸಮುದಾಯದ ಒಗ್ಗಟ್ಟಿಗೆ ದಿಟ್ಟ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *