ನೈಜ್ಯ ದೆಸೆ : ಲಿಂಗಸಗೂರು : ಡಿ 25 ,
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕ 2025 ಅನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಲಿಂಗಸಗೂರು ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಗ್ರೇಡ್ 2 ತಹಶೀಲ್ದಾರ್ ಬಸವರಾಜ್ ಝಳಕಿ ಮಠ ರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಲಿಂಗಸಗೂರು ಬಿಜೆಪಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ . ನಂತರ ಮಾತನಾಡಿದ ಬಿಜೆಪಿ ಮುಖಂಡರು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಈ ವಿಧೇಯಕ ಜಾರಿಗೊಂಡಿದೆ ಎಂದು ಆರೋಪಿಸಿದರು. ಸಂವಿಧಾನದ 19(1)ನೇ ವಿಧಿಯಡಿ ದೊರಕಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ವಿಧೇಯಕ ಉಲ್ಲಂಘಿಸುತ್ತಿದ್ದು, ನಾಗರಿಕರ ಅಭಿವ್ಯಕ್ತಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದರು.
ಈ ವಿಧೇಯಕದಿಂದ ಸಾಮಾಜಿಕ ಚಳುವಳಿಗಳು, ಸಭೆ-ಸಮಾರಂಭಗಳು, ಮಾಧ್ಯಮ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಇಂತಹ ವಿಧೇಯಕವನ್ನು ಜಾರಿಗೊಳಿಸಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದ ರಕ್ಷಣೆ ಮಾಡಬೇಕಾದ ಸರ್ಕಾರವೇ ಸಂವಿಧಾನ ವಿರೋಧಿ ಕಾನೂನು ಜಾರಿಗೆ ತಂದಿದೆ ಎಂದು ದೂರಿದರು. ಒಂದು ವೇಳೆ ಈ ವಿಧೇಯಕವನ್ನು ಹಿಂಪಡೆಯದೆ ಜಾರಿಗೊಳಿಸಿದರೆ, ರಾಜ್ಯ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು . ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ಕೆ ನಾಗಭೂಷಣ್ ಹಾಗೂ ಮುದುಗಲ್ ಮಂಡಲ ಅಧ್ಯಕ್ಷ ಹುಲ್ಲೇಶ್ ಸಾಹುಕಾರ್ , ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷ ಅಯ್ಯಪ್ಪ ಮಾಳೂರು, ಹಿರಿಯ ಮುಖಂಡ ಗಿರಿಮಲ್ಲನಗೌಡ ಕರಡಕಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ಭೀಮಣ್ಣ , ಶಂಕರಗೌಡ ಹಟ್ಟಿ, ವೀರನಗೌಡ ಸಣಗೌಡರ್ ಹನುಮಂತ ಮಲ್ಲ, ಖಾಜಾಸಾಬ್ ಆದಿಮನಿ, ಶಾಸಕರ ಆಪ್ತ ಸಹಾಯಕ ಪಕೀರಪ್ಪ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

