ಅರಕೇರಾ:
ತಾಲೂಕಿನ ಬಿ.ಗಣೇಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾರುತೇಶ್ವರ ಸ್ವಾಮಿ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಎಳ್ಳು ಅಮಾವಾಸ್ಯೆಯ ಐದನೇ ದಿನದ ಕಾರ್ಯಕ್ರಮದ ಅಂಗವಾಗಿ ಶ್ರೀ ಮಾರುತೇಶ್ವರ ದೇವರಿಗೆ ಬೆಳಿಗ್ಗಿನಿಂದಲೇ ವಿವಿಧ ಪೂಜೆ ಕೈಗೊಂಡು ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಸಂಪ್ರದಾಯದಂತೆ ರಥ ನಿರ್ಮಿಸಿದರು. ಹೂವಿನ ಹಾರ, ರುದ್ರಾಕ್ಷಿ ಹಾರ, ವಿದ್ಯುತ್ ದೀಪದ ಮಾಲೆ, ಮತ್ತು ಬಣ್ಣದ ಚಿತ್ರಗಳಿಂದ ರಥವನ್ನು ಅಲಂಕರಿಸಿ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಮಧ್ಯಾಹ್ನ ಸರ್ವಜನಾಂಗದ ವತಿಯಿಂದ ದೈವಪೂಜೆ, ದೀರ್ಘದಂಡ ನಮಸ್ಕಾರ ಭಕ್ತಿಯಿಂದ ಭಕ್ತಾದಿಗಳು ದೇವರಿಗೆ ಸಮರ್ಪಿಸಿದರು. ರಾತ್ರಿ 7.30 ಗಂಟೆಗೆ ಗುಡಿಯಿಂದ ಶ್ರೀ ಮಾರುತೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ಪಲ್ಲಕ್ಕಿ ಉತ್ಸವದೊಂದಿಗೆ ರಥದ ಬಳಿ ಕರೆತಂದು ಮಂಗಳಾರತಿ ಮಾಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುವ ಮಾರ್ಗದಲ್ಲಿ ಡೊಳ್ಳು, ವಿವಿಧ ವಾದ್ಯಗಳೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಂತಿಮವಾಗಿ ರಾತ್ರಿ 9 ಗಂಟೆಗೆ ರಥದಿಂದ ದೇವರ ಉತ್ಸವ ಮೂರ್ತಿಯನ್ನು ಇಳಿಸಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗುಡಿದುಂಬಿಸಲಾಯಿತು.

