ಆಳಂದ ಪಟ್ಟಣದ ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಗ್ರ್ಯಾಂಡ್ ಪೆರೆಂಟ್ಸ್ ಡೇ ಕಾರ್ಯಕ್ರಮವನ್ನು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಉದ್ಘಾಟಿಸಿದರು. ಪ್ರಾಚಾರ್ಯೆ ಜ್ಯೋತಿ ವಿಶಾಕ್ ಸೇರಿದಂತೆ ಇತರರು ಇದ್ದರು.
ಕಿಕ್ಕರ್: ಎಸ್‌ಆರ್‌ಜಿ ಶಾಲೆಯಲ್ಲಿ ಗ್ರ್ಯಾಂಡ್ ಪೆರೆಂಟ್ಸ್ ಡೇ, ರೈತರ ದಿನಾಚರಣೆ ಆಚರಣೆ
ಹಿರಿಯರು ನಮ್ಮ ಸಮಾಜದ ಮಾರ್ಗದರ್ಶಕರು- ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ
ಹಿರಿಯ ನಾಗರಿಕರು ನಮಗೆ ಮಾರ್ಗದರ್ಶನ ಮಾಡುತ್ತಾ ಸಮಾಜದ ಬಗ್ಗೆ ಉದಾತ್ತ ಧ್ಯೇಯಗಳನ್ನು ಹೊಂದಿದ್ದಾರೆ ಹೀಗಾಗಿ ಅವರ ಬಗ್ಗೆ ತಾತ್ಸಾರ ಮನೋಭಾವನೆ ತಾಳದೇ ಸಮಾಜದ ಆಸ್ತಿಯೆಂದು ತಿಳಿದು ಗೌರವಿಸಬೇಕು ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಮಂಗಳವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್ ಆರ್ ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರ್ಯಾಂಡ್ ಪೆರೆಂಟ್ಸ್ ಡೇ, ರೈತರ ದಿನಾಚಾರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿಗಳಾಗಿದ್ದ ದಿ. ರುಕ್ಮಯ್ಯ ಗುತ್ತೇದಾರ ಅವರ ೧೩ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಯಸ್ಸಿನಿಂದ ಮಾಗಿದ ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು. ಅವರನ್ನು ಗೌರವಿಸುವ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬುವುದು, ವೃದ್ಧಾಪ್ಯದ ಕಾಲದಲ್ಲಿ ಅವರನ್ನು ಕಾಡುವ ಏಕಾಂಗಿತನ, ಅಭದ್ರತೆ, ಆರೋಗ್ಯ ಸಮಸ್ಯೆಗಳನ್ನು ಅರಿತು ಅವರ ಬದುಕಿಗೆ ಆಸರೆ ಮತ್ತು ಚೈತನ್ಯ ನೀಡವುದು ಸಮಾಜದ ಕರ್ತವ್ಯ ಎಂದು ಹೇಳಿದರು.
ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಹಿರಿಯರು ಮಕ್ಕಳು, ಮೊಮ್ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇಂದು ಮಕ್ಕಳು, ಮೊಮ್ಮಕ್ಕಳು ಉದ್ಯೋಗಕ್ಕಾಗಿ ಮನೆಯಿಂದ ದೂರವಿದ್ದು, ಮನೆಯಲ್ಲಿರುವ ಹಿರಿಯರು ಏಕಾಂಗಿ ಜೀವನ ನಡೆಸುವ ಅಥವಾ ವೃದ್ಧಾಶ್ರಮ ಸೇರುವ ಸ್ಥಿತಿ ನಿರ್ಮಾಣವಾಗಿದೆ. ನಗರಕ್ಕಿಂತಲೂ ಗ್ರಾಮೀಣ ಪ್ರದೇಶದ ಹಿರಿಯರು ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದವರು ಬೇಸರಿಸಿದರು.
ರೈತರಿಲ್ಲದ ಸಮಾಜವನ್ನು ಉಹಿಸಿಕೊಳ್ಳುವುದು ಕಷ್ಟ . ರೈತರು ಅನ್ನದಾತರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವಕಾಲದಿಂದಲೂ ರೈತರ ಶೋಷಣೆ ನಿಂತಿಲ್ಲ. ಪ್ರಕೃತಿ ಕೈ ಹಿಡಿದರೇ ರೈತರು ಯಾರ ಮುಂದೆಯೂ ಕೈ ಚಾಚುವುದಿಲ್ಲ ಅದಕ್ಕಾಗಿ ರೈತರು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ರೈತ ಸಮೂಹ ಯೋಚಿಸಬೇಕಾಗಿದೆ ಎಂದರು.
ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಕ್ ಮಾತನಾಡಿ. ಶಾಲೆಯಲ್ಲಿ ಸಂಸ್ಥೆಯ ವತಿಯಿಂದ ಸಮಾಜಕ್ಕೆ ಅಗತ್ಯವಾಗಿರುವ ವಿಷಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ವಿಷಯಗಳ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಸಂಸ್ಥೆಯ ಧ್ಯೇಯ ವಾಕ್ಯ ಸಂಸ್ಕೃತಿ, ಭವಿಷ್ಯ, ಜ್ಞಾನ ವಿಷಯಗಳಿಗೆ ಒತ್ತು ನೀಡಲಾಗುತ್ತಿದೆ. ಇಂದು ಜಾಗತೀಕರಣದ ಪ್ರಭಾವದಿಂದ ಜಗತ್ತು ಚಿಕ್ಕದಾಗಿದೆ ಎಲ್ಲರೂ ತುಂಬಾ ಹತ್ತಿರವಾಗಿದ್ದೇವೆ ಆದರೆ ಭಾವನೆಗಳಿಂದ ದೂರವಾಗಿದ್ದೇವೆ ಎಂದರು.
ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ, ಕಾಶಿನಾಥ ಬಿರಾದಾರ, ಶಿವಶರಣಪ್ಪ ಚಿಂಚನಸೂರ, ಗುರುನಾಥ ಭಾವಿ ಇದ್ದರು.
ಶಿಕ್ಷಕಿ ಸುಪ್ರಿಯಾ ನಿರೂಪಿಸಿದರೆ, ವಿಜಯಲಕ್ಷ್ಮಿ ಸ್ವಾಗತಿಸಿದರು. ನಾಗಮ್ಮ ವಂದಿಸಿದರು.

