ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಸಿರಿ ಪೌಂಡೇಷನ್ (ರಿ)ರಾಯಚೂರು ವತಿಯಿಂದ ಸಾಲುಮರದ ತಿಮ್ಮಕ್ಕ ಸ್ಮರಣಾರ್ಥವಾಗಿ ಹಸಿರು ನಮನ ಕಾರ್ಯಕ್ರಮ ಹಾಗೂ 114 ಸಸಿ ನೆಡುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಬಸನಗೌಡ ತುರವಿಹಾಳ ಅವರು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು.ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ವಿದ್ಯಾರ್ಥಿಗಳೊಂದಿಗೆ ಒಂದೊಂದು ಗಿಡ ನೆಟ್ಟು ವೃಕ್ಷ ಮಾತೆಯ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಆರ್ ಬಸನಗೌಡ ತುರವಿಹಾಳ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಮಾತನಾಡಿ ತಿಮ್ಮಕ್ಕ ಅವರು ನಿಧನದ ಹಿನ್ನಲೆಯಲ್ಲಿ ಇಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವನಸಿರಿ ಪೌಂಡೇಷನ್ ವತಿಯಿಂದ 114 ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿರುವವುದು ಶ್ಲಾಘನೀಯ.
ಸಾಲುಮರದ ತಿಮ್ಮಕ್ಕ ಅವರು 114 ವರ್ಷಗಳ ಕಾಲದ ಜೀವಿತಾವಧಿಯಲ್ಲಿ ಮಾಡಿರುವ ಹಸಿರು ಕ್ರಾಂತಿ ಕಾರ್ಯ ಯಾವಾಗಲು ನಮ್ಮ ಮನದಲ್ಲಿ ಉಳಿಯುವಂತಹ ಕಾರ್ಯವಾಗಿದೆ.
ಪ್ರತಿಯೊಬ್ಬರೂ ಮನೆಗೊಂದು ಮರವನ್ನು ಬೆಳೆಸಿದರೆ ಸಾಲು ಮರದ ತಿಮ್ಮಕ್ಕ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರ ಜಾಗೃತಿ ಕೂಡಾ ಅಷ್ಟೇ ಮುಖ್ಯವಾಗಿದೆ. ಮಲೆನಾಡಿನ ಬದುಕೇ ಹಚ್ಚ ಹಸಿರಾಗಿರುತ್ತದೆ ಆ ಭಾಗದಲ್ಲಿ ಹಸಿರಿನ ವಾತಾವರಣ ನೋಡಲಿಕ್ಕೆ ಹೋಗುತ್ತೇವೆ ಆದರೆ ನಮ್ಮ ಭಾಗದಲ್ಲಿ ಅದೇರೀತಿ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ನಾವೆಲ್ಲರೂ ಹೊಂದಬೇಕು ಎಂದರು.

