ಸಿರವಾರ : ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ – ನಗರಾಭಿವೃದ್ಧಿ ಕೋಶ, ರಾಯಚೂರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರಾಯಚೂರು ಹಾಗೂ ಪಟ್ಟಣ ಪಂಚಾಯತ್ ಕಾರ್ಯಾಲಯ, ಸಿರವಾರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ (ವಾರ್ಡ್) ಸಭೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ವೈ. ಬೂಪನಗೌಡ ಅವರು ವಹಿಸಿಕೊಂಡು ಮಾತನಾಡಿ, ವಿಕಲಚೇತನರ ಸಬಲೀಕರಣಕ್ಕೆ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಅಗತ್ಯ ಸೌಲಭ್ಯಗಳು, ಮಾಹಿತಿ ಮತ್ತು ಬೆಂಬಲ ನೀಡಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಿದೇವಿ, ಸಮುದಾಯ ಸಂಘಟಕ ಹಂಪಯ್ಯ ಪಾಟೀಲ್, ಆರ್.ಐ ಗೋಪಾಲ್, ಸಂಕಲ್ಪ ವಿಕಲಚೇತನರ ಒಕ್ಕೂಟದ ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ, ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನಂದಕುಮಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ವಿಕಲಚೇತನರ ಹಕ್ಕುಗಳು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು, ಪಿಂಚಣಿ, ಗುರುತಿನ ಚೀಟಿ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ವಿಕಲಚೇತನರು ಮತ್ತು ಅವರ ಪಾಲಕರು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮವು ವಿಕಲಚೇತನರಲ್ಲಿ ಆತ್ಮವಿಶ್ವಾಸ, ಜಾಗೃತಿ ಮತ್ತು ಸಬಲೀಕರಣದ ಸಂದೇಶವನ್ನು ನೀಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

