ಲಿಂಗಸಗೂರು : ಡಿ 22 ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಜನಪ್ರಿಯ ಶಾಸಕ ಮಾನಪ್ಪ ಡಿ. ವಜ್ಜಲ್ ಅವರು “ಪಲ್ಸ್ ಪೋಲಿಯೋ” ಅಭಿಯಾನವನ್ನು ಉದ್ಘಾಟಿಸಿದರು. ಪುಟ್ಟ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿ, ಲಸಿಕಾ ಅಭಿಯಾನದ ಮಹತ್ವವನ್ನು ಹೇಳಿದರು .
ನಂತರ ಆಸ್ಪತ್ರೆಯಲ್ಲಿ ನೂತನವಾಗಿ ಮೂರು ಆಂಬುಲೆನ್ಸ್ ವಾಹನಗಳಿಗೆ ಶಾಸಕರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಆಂಬುಲೆನ್ಸ್‌ಗಳಿಂದ ಲಿಂಗಸಗೂರು ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತ ಹಾಗೂ ಉತ್ತಮ ತುರ್ತು ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.
ನಂತರ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಮಹತ್ವದ ಪಾತ್ರ ವಹಿಸುತ್ತಿದ್ದು, ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವೈದ್ಯಾಧಿಕಾರಿ ಡಾ. ರುದ್ರಗೌಡ ಅವರು ಪೋಲಿಯೋ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಲಿಂಗಸಗೂರು ಮಂಡಲ ಅಧ್ಯಕ್ಷ ಕೆ. ನಾಗಭೂಷಣ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಪ್ರಮುಖ ಗಣ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

