ರಾಯಚೂರು ಡಿಸೆಂಬರ್ 20 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಡಿಸೆಂಬರ್ 21ರಿಂದ ಡಿಸೆಂಬರ್ 24ರವರೆಗೆ ನಿಗದಿಯಾದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು.
ಡಿಸೆಂಬರ್ 20ರ ಶನಿವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಎರಡನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 1132 ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 2,59,984 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘ ಸಂಸ್ಥೆಗಳು ವಿವಿಧ ಇಲಾಖೆಗಳ ಸಹಕಾರ ಅಗತ್ಯವಿರುವದರಿಂದ ಎಲ್ಲರೂ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದರು.
ಪೋಲಿಯೋ ಲಸಿಕಾ ಅಭಿಯಾನಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಡಿ.21ರಿಂದ ಗೊತ್ತುಪಡಿಸಿರುವ ಲಸಿಕಾ ಕೇಂದ್ರಗಳಲ್ಲಿ 5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ನೀಡಲು ಕ್ರಮವಹಿಸಬೇಕು. ಮನೆಮನೆ ಭೇಟಿ ಮೂಲಕವು ಸಹ ಆರೋಗ್ಯ ಕಾರ್ಯಕರ್ತರು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ. ಸಾರ್ವಜನಿಕರು ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
1132 ಲಸಿಕಾ ಬೂತ್‌ಗಳ ಸ್ಥಾಪನೆ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಅವರು ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 143, ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 140, ಲಿಂಗಸುಗೂರು ತಾಲೂಕಿನಲಿ 211, ಮಾನ್ವಿ. ತಾಲೂಕಿನಲ್ಲಿ 221, ಸಿಂಧನೂರು. ತಾಲೂಕಿನಲ್ಲಿ 248, ರಾಯಚೂರು ಗ್ರಾಮೀಣ ಭಾಗದಲ್ಲಿ 169 ಸೇರಿದಂತೆ ಜಿಲ್ಲಾದ್ಯಂತ 1132 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಲಸಿಕಾ ಕಾರ್ಯಕ್ರಮದ ಕುರಿತು ಆಟೋ, ಸ್ಥಳೀಯ ಸಂಸ್ಥೆಯ ಕಸದ ಸಂಗ್ರಹಣೆ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ, ಬ್ಯಾನರ್ ಹಾಗೂ ಕರಪತ್ರಗಳನ್ನು ಅಂಟಿಸುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೂತ್‌ಗಳ ಜೊತೆಗೆ 33 ಮೊಬೈಲ್ ತಂಡ ಹಾಗೂ 53 ಟ್ರಾನ್ಸಿಟ್ ತಂಡಗಳು ಕಾರ್ಯನಿರ್ವಹಿಸಲಿದ್ದು, 2436 ಸ್ವಯಂ ಸೇವಕರು ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದನ್ನು ಮೇಲ್ವಿಚಾರಣೆ ಮಾಡಲು 248 ಮೇಲ್ವಿಚಾರಕರು ಕೆಲಸ ಮಾಡಲಿದ್ದಾರೆ. 2 ರೈಲ್ವೇ ಸ್ಟೇಷನ್ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳು, ಕೆಲ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ನೀಡಲು ಪ್ರದೇಶವನ್ನು ಗುರುತಿಸಲಾಗಿದೆ. ಈ ಸಂಬಂಧ ಎಲ್ಲಾ ಕಡೆ ಸಕ್ರಿಯವಾಗಿ ಲಸಿಕೆ ಹಾಕುವ ಸಿಬ್ಬಂದಿಗಳನ್ನು ನಿಯೋಜಿಸಿ ಲಸಿಕೆ ಹಾಕುವ ಕಾರ್ಯವನ್ನು ಸಮರ್ಪಕವಾಗಿ ಮಾಡಲಾಗುವುದೆಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿಜಯ ಶಂಕರ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಶಾಕೀರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಕಾಂಬಳೆ, ಡೆಂಗೆ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ, ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಜೆಸ್ಕಾಂನ ಎಇಇ ಶಿವನಗುತ್ತಿ, ಸಾರಿಗೆ ಇಲಾಖೆಯ ಆರ್ಜುನ್, ರಾಯಚೂರು ಸಿಡಿಪಿಒ ಮನಸೂರ್ ಅಹ್ಮದ್ ಸೇರಿದಂತೆ ಇತರರು ಇದ್ದರು.


