ಸಿಂಧನೂರು ತಾಲೂಕಿನ ರಾಮತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದಿದ್ದಿಗಿ ಗ್ರಾಮದಲ್ಲಿ ಪಕ್ಕದ ಮನೆಭದ್ರತೆ, ಪರವಾನಗಿ ಪಡೆಯದಿರುವ ಕಾರಣಕ್ಕೆ ಹಿಟ್ಟಿನ ಗಿರಣಿ ಮುಚ್ಚುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆದೇಶ ಮಾಡಿದರೂ ಸಹ ಕ್ಯಾರೇ ಎನ್ನದ ಪಿಡಿಒ ಆದೇಶ ಪಾಲನೆಗೆ ಮುಂದಾಗುತ್ತಿಲ್ಲ.
ಇದು ಹೀಗೆ ಮುಂದುವರೆದರೆ, ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ವೀರೇಶ ದಿದ್ದಿಗಿ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2019ರಲ್ಲಿ ಶಿವಗ್ಯಾನಪ್ಪ ತಂದೆ ಗ್ಯಾನಪ್ಪ ಕಡ್ಲಿಯವರು, ಹಿಟ್ಟಿನ ಗಿರಣಿಯನ್ನು ಯಾವುದೇ ಪರವಾನಗಿ ಪಡೆಯದೆ ಪ್ರಾರಂಭಿಸಿದ್ದಾರೆ.
ಹಿಟ್ಟಿನ ಗಿರಣಿ ಸೌಂಡ್ ನ ರಭಸಕ್ಕೆ ಪಕ್ಕದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಪಕ್ಕದಲ್ಲಿರುವ ಮನೆ ಮಹಾಂತೇಶ ಅವರದು, ಬೀಳುವ ಆತಂಕದಲ್ಲಿದ್ದಾರೆ.
ಪ್ರತಿದಿನ ಪಕ್ಕದ ಮನೆಯ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಹಾಗೂ ವಿಪರೀತ ಕರ್ಕಶವಾದ ಶಬ್ದಕ್ಕೆ ಗಿರಣಿ ಸುತ್ತಮುತ್ತಲಿನ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತಲ್ಲಿ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅವರು
ಗಿರಣಿ ನಡೆಸಲಿ ಆದರೆ ಜನ ವಸತಿ ಇಲ್ಲದ ಪ್ರದೇಶದಲ್ಲಿ ನಡೆಸಲಿ, ಗಿರಣಿಯನ್ನು ಪರವಾನಗಿ ಪಡೆದು ನಡೆಸಲಿ ಇದಕ್ಕೆ ನಮ್ಮ ಸುತ್ತಮುತ್ತಲಿನವರ ತಕರಾರು ಏನಿಲ್ಲ.
ಜನ ವಸತಿ ಪ್ರದೇಶದಲ್ಲಿ ಬಿಟ್ಟು ಬೇರೆ ಕಡೆಗೆ ತೆರವುಗೊಳಿಸಿ ಎಂದು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅದರಂತೆ ಸ್ಥಳಕ್ಕೆ ತಾಲೂಕು ಪಂಚಾಯತಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಗಿರಣಿ ಮುಚ್ಚುವಂತೆ ಆದೇಶ ಮಾಡಿದ್ದಾರೆ. ಆದರೂ ಅದು ಪಾಲನೆಯಾಗಿಲ್ಲ. ರಾಮತ್ನಾಳ್ ಪಿಡಿಒ ಮೊಹಿನ್ ಪಾಷಾ ಈ ಕೂಡಲೇ ಗಿರಣಿ ಸ್ಥಳಾಂತರಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಸಿದರು.
ಇದೇ ವೇಳೆ ಮಹಾಂತೇಶ, ನಾಗೇಶ, ರಾಘವೇಂದ್ರ, ಇದ್ದರು.

