ರಾಯಚೂರು ಡಿಸೆಂಬರ್ 17 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಐದು ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಗರದಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದು, ಪೋಲಿಯೋ ಬೂತ್ ಗಳ ಮಾಹಿತಿ ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ಹತ್ತಿರದ ಬೂತ್ ವಿಳಾಸವನ್ನು ಪಡೆದು ಲಸಿಕೆ ಹಾಕಿಸಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಕೋರಿದ್ದಾರೆ.
ನಗರದ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಸಾರ್ವಜನಿಕರು ಕೈಜೋಡಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸಲು ಡಿಸೆಂಬರ್ – 21ರಂದು ಎಲ್ಲಾ ಸರಕಾರಿ ಆಸ್ಪತ್ರೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗನವಾಡಿ ಮತ್ತು ಶಾಲೆಗಳಲ್ಲಿ ಬೂತ್ ತೆರೆಯಲಾಗಿದೆ. ಬೂತ್ ಗಳ ಮಾಹಿತಿಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

