ಮಾನ್ವಿ : ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಮಾನ್ವಿ ನಗರದ ಉರ್ದು ಪ್ರೌಢಶಾಲೆಯಲ್ಲಿ ಧ್ಯಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಉಚಿತ ಯೋಗ–ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಮಧ್ಯಾಹ್ನ 3:00 ರಿಂದ 4:30 ರವರೆಗೆ ಯೋಗ ಗುರು ಅನ್ನದಾನಯ್ಯ ಅವರು ನಡೆಸಿಕೊಟ್ಟರು.

ಶಿಬಿರದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಸನಗಳ ಅಭ್ಯಾಸ ಮಾಡಿಸಲಾಯಿತು. ವೃಕ್ಷಾಸನ, ತ್ರಿಕೋಣಾಸನ, ಉತ್ಕಟಾಸನ, ಪಾದಸ್ತಾಸನ, ಜಾನುಶೀರಾಸನ, ಉಷ್ಟ್ರಾಸನ ಹಾಗೂ ವಜ್ರಾಸನಗಳನ್ನು ಕ್ರಮಬದ್ಧವಾಗಿ ಹೇಳಿಕೊಡಲಾಯಿತು. ನಂತರ ನಾಡಿ ಶುದ್ಧಿ ಪ್ರಾಣಾಯಾಮ ಮತ್ತು ಬ್ರಾಹ್ಮರಿ ಪ್ರಾಣಾಯಾಮದ ಕುರಿತು ತರಬೇತಿ ನೀಡಿ, ಕೊನೆಯಲ್ಲಿ ಧ್ಯಾನ ವಿಧಾನವನ್ನು ತಿಳಿಸಿಕೊಡಲಾಯಿತು. ಯೋಗ ಮತ್ತು ಧ್ಯಾನದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸಹ ವಿವರಿಸಲಾಯಿತು.

ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಮುಖ್ಯಗುರು ಅಶೋಕ್ ಕುಮಾರ್ ಚಿಂಚೋಳ್ಳಿ ಅವರು, ಇಂದಿನ ವೇಗದ ಜೀವನಶೈಲಿಯಲ್ಲಿ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಶಾಂತ ಜೀವನ ನಡೆಸಲು ಯೋಗ ಮತ್ತು ಧ್ಯಾನ ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಯೋಗ–ಧ್ಯಾನವನ್ನು ಅಭ್ಯಾಸ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಯೋಗ ಗುರು ಅನ್ನದಾನಯ್ಯ ಅವರನ್ನು ಶಾಲಾ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿ ಅಹಮ್ಮದಿ ಬೇಗಮ್, ಅತಿಥಿ ಶಿಕ್ಷಕರಾದ ಆಯಿಷಾ ಬೇಗಮ್, ಇಮ್ರಾನ್ ಬೇಗಮ್, ಸಿದ್ದಪ್ಪ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *