ನಿವೃತ್ತಿ ಹೊಂದಿದವರು ನಮ್ಮಿಂದ ಏನೂ ಆಗಲ್ಲ ಅನ್ನೋ ಮನೋಭಾವನೆಯನ್ನು ಬಿಡಬೇಕು ಹೆಚ್ಚು ಚಟುವಟಿಕೆಯಲ್ಲಿರಬೇಕು. ಸಾಧ್ಯವಾದಷ್ಟು ಕ್ರಿಯಾ ಶೀಲರಾಗಬೇಕು. ತಲೆಯನ್ನು ಖಾಲಿ ಬಿಡಬಾರದು ಏನಾದರೊಂದು ಕೆಲಸದಲ್ಲಿ ತೊಡಗಿರಬೇಕು. ಮಕ್ಕಳು ಮೊಮ್ಮಕ್ಕಳು, ಗೆಳೆಯರ, ಜೊತೆ ಕಾಲ ಕಳೆಯುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಿ ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.

ನಗರದ ಮಿಲಾಪ್ ಶಾದಿಮಹಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘ ತಾಲೂಕು ಘಟಕದಿಂದ ನಿವೃತ್ತ ಹಾಗೂ ಪಿಂಚಣಿ ನೌಕರರ ದಿನಾಚರಣೆ ಮತ್ತು 75 ಮೇಲ್ಪಟ್ಟ ನಿವೃತ್ತ ನೌಕರರಿಗೆ ಗೌರವ ಸನ್ಮಾನದ ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತರು ಅನಾಥರಲ್ಲ. ದೇವರ ಮೇಲೆ ಭರವಸೆಯಿಟ್ಟು ಮುಂದೆ ಸಾಗಬೇಕು. ಹುಟ್ಟಿದವರು ಸಾಯಲೇಬೇಕು. ಸಾಯುವ ಮುನ್ನ ಚಿಂತನೆ ಮಾಡದೆ ಸಂತೋಷದ ಬದುಕು ಸಾಗಿಸಬೇಕು ಎಂದರು.

ನಂತರ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಅನೇಕ ದೊಡ್ಡ ಪಟ್ಟಣಗಳಲ್ಲಿ ಹೋಮ್ ಫಾರ್ ಏಜ್ ಗಳು ಇದ್ದಾವೆ, ಈ ಹಿಂದಿನ ಕಾಲದಲ್ಲಿ ಊರುಗಳಲ್ಲಿ ಕೂಡು ಕುಟುಂಬ ಇರತ್ತಿದ್ದವು ಕ್ರಮೇಣ ಕ್ಷೀಣಿಸಿದೆ. ಸಂಕ್ರಮಣ, ಎಳ್ಳ ಅಮವಾಸ್ಯೆ ಬಂದರೆ, ಕುಟುಂಬ ಸಮೇತ ಹೊಲಗದ್ದೆಗಳಿಗೆ ಹೋಗಿ ಪೂಜೆ ಪುನಸ್ಕಾರ ಮಾಡಿ, ಊಟ ಮಾಡಿ ಬರುತ್ತಿದ್ದ ಕಾಲವಿತ್ತು. ಈಗ ಅದು ಇಲ್ಲ. ನಿವೃತ್ತ ನೌಕರರು ಎಲ್ಲರೂ ಸೇರಿ ಬರುವುದಾದರೆ ಎಳ್ಳ ಅಮವಾಸ್ಯೆ ದಿನದಂದು ನಮ್ಮ ಹೊಲಗಳಿಗೆ ಔತಣಕೂಟ ಏರ್ಪಡಿಸುವೆ ಎಲ್ಲರೂ ಬರಬೇಕು ಎಂದು ನಿವೃತ್ತ ನೌಕರರಲ್ಲಿ ಮನವಿ ಮಾಡಿದರು.

ತದನಂತರ ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ.ಜಿಲಾನಿಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ್, ಎಸ್.ಟಿ.ಓ.ಉಪಖಜಾನೆ ನಾಗರಾಜ, ಮಾತನಾಡಿದರು. 75 ವರ್ಷ ಮೇಲ್ಪಟ್ಟ ಸುಮಾರು 45 ಜನರ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಿದರು.

ಬಡೆಬೇಸ್ ಶಾಲೆಯ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು. ಈ ವೇಳೆ ವೇದಿಕೆ ಮೇಲೆ ಅಧ್ಯಕ್ಷ ಟಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ಎಸ್.ಬಿ.ಐ ಬ್ಯಾಂಕ್ ಮುಖ್ಯ ಶಾಖೆಯ ವ್ಯವಸ್ಥಾಪಕ ಅಮೂಲ್ ಲೋಕಡಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜೆ.ಬಾಬುರಾವ್, ಮಾನ್ವಿ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಶಂಕರಗೌಡ ಎಸ್.ಪಾಟೀಲ್, ಇದ್ದರು. ಬೀರಪ್ಪ ಶಂಭೋಜಿ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *