ರಾಯಚೂರು :
ಜಿಲ್ಲಾ ಪಂಚಾಯತ್ ಲೆಕ್ಕಶಾಖೆಯ ಸಹಾಯಕ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಗ್ ರಾವ್ ಗುಜ್ಜರ್ ಅವರ ವಿರುದ್ಧ ಮಾನ್ಯ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಅಸಮತೋಲನಾ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದಿರುಗಿಸಬೇಕು ಎಂದು ದಲಿತ ಸೇನೆ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಕುರಿತು ಮಾತನಾಡಿದ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಮಾರುತಿ ಚಿಕ್ಕಸೂಗೂರು ಅವರು, ನರಸಿಂಗ್ ರಾವ್ ಗುಜ್ಜರ್ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಆದಾಯಕ್ಕಿಂತ ಶೇ.89.41ರಷ್ಟು ಅಕ್ರಮ ಸಂಪಾದನೆಯ ಅಸಮತೋಲನಾ ಆಸ್ತಿ ಪತ್ತೆಯಾಗಿದ್ದು, ಸುಮಾರು 55 ಲಕ್ಷ ರೂ.ಗಳ ಚರ–ಸ್ಥಾವರ ಆಸ್ತಿಯನ್ನು ಕಾನೂನುಬಾಹಿರವಾಗಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಇಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಅವರು ಮುಂದುವರೆದು ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರೆ, ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗುವುದರ ಜೊತೆಗೆ, ಪ್ರಭಾವಿ ಹುದ್ದೆಯಲ್ಲಿರುವ ಕಾರಣದಿಂದ ಸಾಕ್ಷ್ಯಗಳನ್ನು ತಿರುಚುವ ಹಾಗೂ ಲೋಕಾಯುಕ್ತ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ, ಅವರ ಓಓಡಿ ರದ್ದುಪಡಿಸಿ ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಸದರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಬೇರೆ ಅಧಿಕಾರಿಗೆ ವಹಿಸುವುದು ಸೂಕ್ತ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸುಧಾರಿತ ಹಾಗೂ ಸುಗಮ ಆಡಳಿತದ ಹಿತದೃಷ್ಟಿಯಿಂದ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸೇನೆ ಜಿಲ್ಲಾ ಸಮಿತಿ ಮನವಿ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ಸುರೇಶ್ ಬಾಬು, ಜೆ.ಮಧುಕಾಂತ್, ಕೃಷ್ಣ ಮಾರ್ಷಲ್ ಸೇರಿದಂತೆ ಇನ್ನಿತರರು ಇದ್ದರು.

