ಬಳ್ಳಾರಿ: ಚೆನ್ನೈನಿಂದ ಬಳ್ಳಾರಿ ನಗರಕ್ಕೆ ದ್ವಿಚಕ್ರ ವಾಹನಗಳನ್ನು ತಂದಿದ್ದ ಟ್ರಕ್‌ ಬೆಂಕಿಗೆ ಆಹುತಿಯಾಗಿದೆ. ಟ್ರಕ್‌ ಸಹಿತ 40 ಬೈಕ್‌ಗಳು ಸುಟ್ಟು ಕರಕಲಾಗಿವೆ.
ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ನಾಶಗೊಂಡಿರುವ ದ್ವಿಚಕ್ರವಾಹನಗಳ ಮೌಲ್ಯ ₹60 ಲಕ್ಷ ಎಂದು ಅಂದಾಜಿಸಲಾಗಿದೆ.
ಬಳ್ಳಾರಿ ನಗರದ ಯಮಹಾ ಶೋರೂಂಗೆ 20, ವಿಜಯಪುರದ ಶೋರೂಂಗೆ 20 ‘ಯಮಹಾ-ಎಫ್‌ಝಡ್‌’ ವಾಹನಗಳನ್ನು ಚೆನ್ನೈನಿಂದ ತಂದಿದ್ದ ಲಾರಿಯನ್ನು ಚಾಲಕ ಭಾನುವಾರ ಮಧ್ಯರಾತ್ರಿ ಬಳ್ಳಾರಿ ನಗರದ ಬೈಪಾಸ್‌ ಬಳಿ ರಸ್ತೆ ಬದಿಯಲ್ಲಿ ಹಾಕಿ ನಿದ್ರೆಗೆ ಜಾರಿದ್ದ ಎನ್ನಲಾಗಿದೆ. ಮುಂಜಾನೆ 5 ಗಂಟೆ ವೇಳೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿತಾದರೂ ಅಷ್ಟರ ಒಳಗಾಗಿ ವಾಹನಗಳ ಸಹಿತ, ಬೈಕ್‌ಗಳೂ ಬೆಂಕಿಗೆ ಆಹುತಿಯಾಗಿವೆ. ಬೈಕ್‌ ಅಥವಾ ಟ್ರಕ್‌ನ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಕಂಪನಿಯ ಅಧಿಕಾರಿಗಳು ಬಂದ ಬಳಿಕ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಗಾಂಧಿನಗರ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *