ಮಾನ್ವಿ : ತುಂಗಭದ್ರಾ ನದಿಯ ಮಾಲಿನ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಲು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ನೇತೃತ್ವದಲ್ಲಿ ‘ನಿರ್ಮಲ ತುಂಗಭದ್ರಾ ಅಭಿಯಾನ’ದ ಮೂರನೇ ಹಂತದ ಪಾದಯಾತ್ರೆ ಇದೀಗ ಮಹತ್ವದ ಘಟ್ಟ ತಲುಪಿದೆ. ಗಂಗಾವತಿಯಿಂದ ಮಂತ್ರಾಲಯದ ತನಕ ಈ ಹಂತದ ಪಾದಯಾತ್ರೆ ನಡೆಯಲಿದೆ. ಇದರ ಭಾಗವಾಗಿ ಅಭಿಯಾನದ ತಂಡದ ಸದಸ್ಯರು ಶನಿವಾರ ನಗರದ ಸರ್ವೋದಯ ಶಿಕ್ಷಣೆ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಸಮೀಕ್ಷಾ ವರದಿಯು ತೀವ್ರ ಆತಂಕ ಮೂಡಿಸಿದ್ದು, ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಮತ್ತು ಇತರೆ ವಿಷಕಾರಿ ತ್ಯಾಜ್ಯಗಳು ಮಿತಿಮೀರಿರುವುದು ದೃಢಪಟ್ಟಿದೆ. ನದಿಗೆ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳು ನಿರಂತರವಾಗಿ ಸೇರುತ್ತಿರುವುದರಿಂದ, ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ, ತುಂಗಭದ್ರಾ ನದಿಯು ಬೆಂಗಳೂರಿನ ಸಂಪೂರ್ಣ ಕಲುಷಿತಗೊಂಡ ವೃಷಭಾವತಿ ನದಿಯಂತಾಗುವ ಅಪಾಯವಿದ್ದು ಈ ಹೋರಾಟದಲ್ಲಿ ರೈತರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಪರಿಸರ ಪ್ರಿಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

