ಬೆಂಗಳೂರು : ಡಿಸೆಂಬರ್ 11: ಸಿಲಿಕಾನ್ ಸಿಟಿ ನಿವಾಸಿಗಳೇ ಈಗ ಇರುವ ವಾತಾವರಣವೇ ನಿಮಗೆ ಚಳಿಚಳಿ ಅನ್ನಿಸುತ್ತಿದ್ಯಾ? ಹಾಗಿದ್ರೆ ಮತ್ತಷ್ಟು ಕೂಲ್ ಕೂಲ್ ವೆದರ್ ಎದುರಿಸಲು ನೀವು ಸಿದ್ಧರಾಗಿ. ರಾಜಧಾನಿ ಬೆಂಗಳೂರಲ್ಲಿ ಮುಂದಿನ ವಾರ ಚಳಿ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಳಾಖೆ ತಿಳಿಸಿದೆ.
ನಗರದ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ನಿರೀಕ್ಷೆಯಿದ್ದು, ಇದು 2016ರ ನಂತರ ಡಿಸೆಂಬರ್‌ನಲ್ಲಿ ದಾಖಲಾಗುವ ಅತಿ ಕಡಿಮೆ ತಾಪಮಾನವಾಗಿದೆ.
ನಗರದಲ್ಲಿ ಚಳಿಗಾಲದ ತೀವ್ರತೆ ಕ್ರಮೇಣ ಹೆಚ್ಚುತ್ತಿದ್ದು, ಮುಂದಿನವಾರ ಬೆಳಗ್ಗಿನ ಹೊತ್ತು ಮತ್ತು ಸಂಜೆ ವೇಳೆ ಭರ್ಜರಿ ಚಳಿ ಇರಲಿದೆ. ಕಳೆದ ವಾರ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಪರಿಣಾಮ ಬೆಂಗಳೂರಿಗರಿಗೆ ಚಳಿಯ ಅನುಭವ ಆಗಿತ್ತು. ಆದ್ರೆ ಮುಂದಿನ ವಾರ ನಗರದ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆ ಆಗಲಿರುವ ಕಾರಣ, ಚಳಿಯೂ ಹೆಚ್ಚಲಿದೆ. IMD ಪ್ರಕಾರ, ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಡಿಸೆಂಬರ್‌ನ ಸರಾಸರಿ 16.4 ಡಿಗ್ರಿಗಿಂತ ಕಡಿಮೆಯಾಗಿದೆ. ಅಂದಾಜು ಪ್ರಕಾರ ತಾಪಮಾನ ಇಳಿಕೆ ಮುಂದುವರಿದರೆ, 2016ರ ಡಿಸೆಂಬರ್ 11ರ ನಂತರ ಅತ್ಯಂತ ಚಳಿಯನ್ನು ಬೆಂಗಳೂರು 2025ರ ಡಿಸೆಂಬರ್ನಲ್ಲಿ ದಾಖಲಿಸಲಿದೆ. ಆ ವೇಳೆ ಕೂಡ ನಗರದ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.
ರಾಜ್ಯದ ಹಲವೆಡೆ ಚಳಿ ಹೆಚ್ಚಡ
ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಚಳಿ ಹೆಚ್ಚಿರಲಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಮತ್ತು ನಾಳೆ ಚಳಿ ಹೆಚ್ಚಿರಲಿದೆ. ಕರಾವಳಿ ಜಿಲ್ಲೆಗಳು ಸೇರಿ ಉಳಿದೆಡೆ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

