ಲಿಂಗಸುಗೂರು : ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಅವಶ್ಯಕ ಎಂದು ಶ್ರೀ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಅಮರೇಶ ಗೌಡೂರು ಹೇಳಿದರು.
ಪಟ್ಟಣದ ಶ್ರೀ ಉಟಕನೂರು ಬಸವಲಿಂಗ ಶಿಕ್ಷಣ ಟ್ರಸ್ಟ್ ಹಾಗೂ ಶ್ರೀ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅದರಲ್ಲಿ ಮಾನವ ಹಕ್ಕುಗಳ ವಿವರಗಳಿವೆ. ಭಾರತ ಪ್ರಜೆಯಾದ ಪ್ರತಿ ವ್ಯಕ್ತಿಯೂ ಈ ಭೂಮಿ ಮೇಲೆ ಸಮಾನತೆ, ಸ್ವಾತಂತ್ರ್ಯದಿಂದ ಗೌರಯುತವಾಗಿ ಬದುಕಬೇಕಾದರೆ ಮಾನವ ಹಕ್ಕುಗಳು ಅವಶ್ಯಕವಾಗಿದೆ ಎಂದರು.

ಮಾನವ ಹಕ್ಕುಗಳು ಮನುಷ್ಯನ ಘನತೆಯನ್ನು, ಸ್ತ್ರೀಯರ ಸಮಾನತೆಯ ಸ್ವಾತಂತ್ರ್ಯವನ್ನು, ಮಕ್ಕಳಿಗೆ ಶಿಕ್ಷಣದ ಹಕ್ಕುಗಳನ್ನು ಒದಗಿಸಿವೆ. ಇವುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿಶ್ವಸಂಸ್ಥೆಯು ಡಿಸೆಂಬರ-10,1948ರಂದು 30 ಅಂಶಗಳನ್ನಳಗೊಂಡ ಮಾನವ ಹಕ್ಕುಗಳನ್ನು ಘೋಷಿಸಿತು. ಈ ಎಲ್ಲಾ ಅಂಶಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ 1993ರಲ್ಲಿ ‘ಮಾನವ ಹಕ್ಕುಗಳ ಆಯೋಗ’ವನ್ನು ರಚಿಸಲಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಾಗೂ ಉಲ್ಲಂಘನೆಯಾದರೆ ಅದಕ್ಕೆ ನ್ಯಾಯಯುತ ಪರಿಹಾರವನ್ನು ನೀಡುವ ಕಾರ್ಯ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ವೆಂಕಟೇಶ ಪೂಜಾರಿ, ಚಂದ್ರಶೇಖರ ಹುನಕುಂಟಿ, ಶಂಬುಲಿಂಗಪ್ಪ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *