ಲಿಂಗಸಗೂರು :- ಡಿ.05
ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ರಾಜಾರೋಷವಾಗಿ ಹೆಚ್ಚುತ್ತಿರುವ ಮಟಕಾ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್, ಗಾಂಜಾ ಮಾರಾಟ ಹಾಗೂ ಲಿಕ್ಕರ್‌ಮಾಫಿಯಾ ಚಟುವಟಿಕೆಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿರುವುದರಿಂದ ಕೂಡಲೇ ಕಡಿವಾಣ ಹಾಕಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌದರಿ ಅವರಿಗೆ ಹಟ್ಟಿ ಘಟಕದ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದರು.
ಪಟ್ಟಣದ ಹಲವು ಭಾಗಗಳಲ್ಲಿ ಅಕ್ರಮ ದಂಧೆಗಳು ನಿರ್ಬಂಧವಿಲ್ಲದೆ ನಡೆಯುತ್ತಿರುವುದು ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಮಹಿಳೆಯರ ಸುರಕ್ಷತೆಗೂ ಗಂಭೀರ ಬೆದರಿಕೆಯಾಗಿದೆ. ಮಹಿಳೆಯರು ರಾತ್ರಿವೇಳೆಯಲ್ಲಿ ಸಂಚರಿಸುವುದಕ್ಕೂ ಹೆದರಿಕೆ
ಅನುಭವಿಸುತ್ತಿದ್ದಾರೆ ಎಂದು ಸಂಘಟನಾಕಾರರು ಆತಂಕ ವ್ಯಕ್ತಪಡಿಸಿದರು. ಈ ಅಕ್ರಮ ದಂಧೆಗಳ ನೇರ ಪರಿಣಾಮವಾಗಿ ಹಟ್ಟಿ ಪಟ್ಟಣದಲ್ಲಿ ಕಳ್ಳತನ, ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. ಮಟಕಾ, ಬೆಟ್ಟಿಂಗ್, ಗಾಂಜಾ ಹಾಗೂ ಲಿಕ್ಕರ್ ಮಾಫಿಯಾಗಳ ಬಲೆಗೆ ಸಿಲುಕಿರುವ ಯುವಕರು ದಿನನಿತ್ಯದ ಖರ್ಚಿಗೆ ಹಣದ ಅವಶ್ಯಕತೆ ಬಿದ್ದಾಗ ಕಳ್ಳತನ,
ರಾಬರಿ, ಕೊಲೆ-ಸುಲಿಗೆಗಳ ಕಡೆ ತಿರುಗುವುದು ಸಾಮಾನ್ಯ ಘಟನೆವಾಗುತ್ತಿದೆ ಎಂದರು.
ಪಟ್ಟಣದ ಪೋಲಿಸ್ ಠಾಣೆ ಕೂಗಳತೆ ದೂರದಲ್ಲೇ ಮುಖ್ಯ ರಸ್ತೆಯಲ್ಲಿ ಕೂತು ಮಟಕಾ ಬರೆದರೂ ಯಾವುದೇ ಕ್ರಮಗೊಂಡಿಲ್ಲ ಹಾಗೂ ತೊಂದರೆ ಹೇಳಿಕೊಂಡು ಠಾಣೆಗೆ ಬಂದ ಕುಟುಂಬಸ್ಥರ ಮೇಲೆಯೇ ಠಾಣೆಯ ಸಿಬ್ಬಂದಿ ಕೆಲವೊಮ್ಮೆ ದೌರ್ಜನ್ಯವೆಸಗಿರುವ ಘಟನೆಗಳು ಠಾಣೆಯಲ್ಲಿ ನಡೆದಿವೆ. ಕೂಡಲೇ ಪಟ್ಟಣ ಶಾಂತಿ,ಮಹಿಳೆಯರ ಭದ್ರತೆ ಮತ್ತು ಯುವಕರ ಭವಿಷ್ಯಕ್ಕಾಗಿ ತಕ್ಷಣವೇ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕೆಂದುಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಹೇರಾ ಬೇಗಂ, ರಮೇಶ ವೀರಾಪುರ, ವನಜಾಕ್ಷಿ , ಪಂಚಲಯ್ಯ , ಹಾಜಿಬಾಬು ಕಟ್ಟಿಮನಿ , ಶಂಶುದ್ದೀನ್ , ಅಲ್ಲಾಭಕ್ಷ ದೇವರಭೂಪುರು ಸೇರಿದಂತೆ ಇತರರು ಇದ್ದರು .

