ಮಾನ್ವಿ: ಪಟ್ಟಣದ ಬಸ್ ಸ್ಟ್ಯಾಂಡ್ ಎದುರುಗಡೆಯ ಸಾರ್ವಜನಿಕ ಶೌಚಾಲಯ ಮುಂಭಾಗದ ರಸ್ತೆ ದಿನೇ ದಿನೇ ಹೆಚ್ಚುತ್ತಿರುವ ಅಶುಚಿ, ಕಸ, ಮೂತ್ರದ ದುರ್ವಾಸನೆಯ ಬಗ್ಗೆ ಗಂಭೀರವಾಗಿ ಗಮನಸೆಳೆಯುವಂತೆ ಕರ್ನಾಟಕ ವೀರ ಸಮರ ಸಂಘ ತಾಲೂಕು ಘಟಕ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ರವರಿಗೆ ಮನವಿ ಸಲ್ಲಿಸಿತ್ತು.
ತಾಲೂಕು ಅಧ್ಯಕ್ಷ ಮಲ್ಲನಗೌಡ ಬೈಲಮರ್ಚೆಡ್ ಮಾತನಾಡಿ, “ಮೂತ್ರಾಲಯ ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಹಲವು ದಿನಗಳಿಂದ ಕಸ ತುಂಬಿ ಗಬ್ಬೆದ್ದು ನಾರುತ್ತಿದೆ. ಜನರು ತಿರುಗಾಡಲು ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಅಶುಚಿ ರೋಗ–ರುಜುನಗಳಿಗೆ ಕಾರಣವಾಗುತ್ತಿದೆ. ಪಟ್ಟಣದಲ್ಲಿ ಬಹುತೇಕ ಕಡೆ ರಸ್ತೆಯ ಬದಿಗಳು ಕಸದ ರಾಶಿ ಹಾಗೂ ಧೂಳಿನಿಂದ ತುಂಬಿದ್ದು, ಉಸಿರಾಟ ಮತ್ತು ಕಣ್ಣುಗಳಿಗೆ ತೊಂದರೆ ಉಂಟುಮಾಡುತ್ತಿದೆ. ಪ್ರತಿದಿನ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು,” ಎಂದು ಹೇಳಿದರು.
ಅವರು ಮುಂದುವರಿಸಿ, “ನಗರ ರಸ್ತೆಗಳ ಮೇಲಿರುವ ಮಣ್ಣು ಹಾಗೂ ಧೂಳನ್ನು ಯಂತ್ರದಿಂದ ಸ್ವಚ್ಛಗೊಳಿಸಿ ಜನರಿಗೆ ಆರಾಮದಾಯಕ ಪರಿಸರ ಕಲ್ಪಿಸುವುದು ಪುರಸಭೆಯ ಜವಾಬ್ದಾರಿ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಫೂಸ್ ಸಾಹೇಬ್, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮೇಟಿಗೌಡ ಹಿರೇಕೊಟ್ಟೆಕಲ್, ದೊಡ್ಡಪ್ಪ ಹೂಗಾರ, ಹನುಮೇಶ ನಾಯಕ ಬೈಲಮರ್ಚೆಡ್, ವಿಜಯಕುಮಾರ ಸುಂಕೇಶ್ವರ, ಮಲ್ಲಿಕಾರ್ಜುನ ಛಲುವಾದಿ, ವೆಂಕಟೇಶ, ತಿಮ್ಮಯ್ಯ, ಆಲಂಪಾಷಾ, ನಜೀರ್ ಇದ್ದರು.

