ರಾಯಚೂರು ಡಿಸೆಂಬರ್ 03 (ಕರ್ನಾಟಕ ವಾರ್ತೆ): ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಮಕ್ಕಳ ಮತ್ತು ಯುವಜನರ ಕಲಾಪ್ರತಿಭೆಯ ಕಲಾ ನೈಪುಣ್ಯತೆಯನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಾಲ ಪ್ರತಿಭೆ/ ಕಿಶೋರ ಪ್ರತಿಭೆ/ ಯುವ ಪ್ರತಿಭೆ ಎಂಬ ಶೀರ್ಷಿಕೆಯಡಿ ಮೂರು ವಿಭಾಗಗಳ ಪ್ರತಿ ಹಂತದ ಸ್ಪರ್ಧಾರೂಪದಲ್ಲಿ ಏರ್ಪಡಿಸುವ ಪ್ರತಿ ಕಲಾಪ್ರಕಾರಗಳಲ್ಲಿ ಈ ಸ್ಪರ್ಧೆಗಳನ್ನು ಡಿಸೆಂಬರ್ 7 ರಂದು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಡಿಸೆಂಬರ್ 08ರಂದು ಯುವ ಪ್ರತಿಭೆ /ಸಮೂಹ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದವರಲ್ಲಿ ಪ್ರಥಮ ಸ್ಥಾನ ಪಡೆದವರನ್ನು ಮಾತ್ರ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು.
ಬಾಲ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷ ತುಂಬಿರಬೇಕು. ಹಾಗೂ 14 ವರ್ಷಕ್ಕಿಂತ ಕಡಿಮೆಯಿರಬೇಕು. ಕಿಶೋರ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 14 ವರ್ಷವಾಗಿರಬೇಕು. ಹಾಗೂ 18 ವರ್ಷಕ್ಕಿಂತ ಕಡಿಮೆಯಿರಬೇಕು. ಮತ್ತು ಯುವ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ 30 ವರ್ಷಕ್ಕಿಂತ ಕಡಿಮೆಯಿರಬೇಕು. ಕ್ರಮವಾಗಿ ಬಾಲ ಪ್ರತಿಭೆ/ ಕಿಶೋರ ಪ್ರತಿಭೆ/ ಯುವ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯು ವಯೋಮಿತಿಯ ದೃಢೀಕರಣಕ್ಕಾಗಿ ಬಾಲ ಪ್ರತಿಭೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು (ವ್ಯಾಸಂಗ ಮಾಡುವ ಶಾಲಾ ವತಿಯಿಂದ) / ಕಿಶೋರ ಪ್ರತಿಭೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು (ವ್ಯಾಸಂಗ ಮಾಡುತ್ತಿರುವ ಶಾಲಾ/ ಕಾಲೇಜು ವತಿಯಿಂದ) / ಯುವ ಪ್ರತಿಭೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು (ವ್ಯಾಸಂಗ ಮಾಡುವ ಕಾಲೇಜಿನಿಂದ) ಪಡೆದ ವಯೋಮಿತಿಯ ದೃಢೀಕರಣದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಬಾಲ ಪ್ರತಿಭೆ/ ಕಿಶೋರ ಪ್ರತಿಭೆ/ ಯುವ ಪ್ರತಿಭೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ ಪಂಚಾಯತಿ/ ನಗರಸಭೆ/ ಪಾಲಿಕೆ ಕಚೇರಿಯಿಂದ ಪಡೆದ ದೃಢೀಕರಣದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಬಾಲ ಪ್ರತಿಭೆ/ ಕಿಶೋರ ಪ್ರತಿಭೆಯಲ್ಲಿ ಏಕವ್ಯಕ್ತಿ ಸ್ಪರ್ಧೆಗಳಿಗೆ ಕಲಾಪ್ರಕಾರಗಳಿಗೆ ತಕ್ಕಂತೆ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಶಾಸ್ತ್ರೀಯ ನೃತ್ಯಕ್ಕೆ 10-ನಿಮಿಷ, ಸುಗಮ ಸಂಗೀತಕ್ಕೆ 7-ನಿಮಿಷ, ಜಾನಪದ ಗೀತೆಗೆ-7 ನಿಮಿಷ, ಹಿಂದುಸ್ಥಾನಿ ಕರ್ನಾಟಕ ವಾದ್ಯ ಸಂಗೀತಕ್ಕೆ-7 ನಿಮಿಷ, ಹಿಂದುಸ್ಥಾನಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ-7 ನಿಮಿಷ, ಚಿತ್ರಕಲೆಯ ಪ್ರದರ್ಶನಕ್ಕೆ-120 ನಿಮಿಷಗಳಂತೆ ಯುವ ಪ್ರತಿಭೆಯಲ್ಲಿ ಏಕವ್ಯಕ್ತಿ ಸ್ಪರ್ಧೆಗಳಿಗೆ ವಿವಿಧ ಕಲಾಪ್ರಕಾರಗಳಿಗೆ ತಕ್ಕಂತೆ ಸಮಯವನ್ನು ನಿಗದಿಪಡಿಸಲಾಗಿದೆ.
ನನ್ನ ಮೆಚ್ಚನ ಸಾಹಿತಿ (ಆಶುಭಾಷಣ ಸ್ಪರ್ಧೆಗೆ)-7 ನಿಮಿಷ, ಶಾಸ್ತ್ರೀಯ ನೃತ್ಯಕ್ಕೆ 10-ನಿಮಿಷ, ಸುಗಮ ಸಂಗೀತಕ್ಕೆ 7-ನಿಮಿಷ, ಹಿಂದುಸ್ಥಾನಿ ಕರ್ನಾಟಕ ವಾದ್ಯ ಸಂಗೀತಕ್ಕೆ-7 ನಿಮಿಷ, ಹಿಂದುಸ್ಥಾನಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ-7 ನಿಮಿಷ, ಚಿತ್ರಕಲೆಯ ಪ್ರದರ್ಶನಕ್ಕೆ-120 ನಿಮಿಷ ಮತ್ತು ಯುವ ಪ್ರತಿಭೆಯಲ್ಲಿ ಮಾತ್ರ ಸಮೂಹ ಸ್ಪರ್ಧೆಯಲ್ಲಿ ನಾಟಕ ಕಲಾಪ್ರಕಾರಕ್ಕೆ-7 ನಿಮಿಷಗಳ ಕಾಲ ಸಮಯವನ್ನು ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಪ್ರತಿ ಕಲಾ ಪ್ರಕಾರದಲ್ಲಿ ಆಯ್ಕೆಯಾದ ಬಾಲ ಪ್ರತಿಭೆ / ಕಿಶೋರ ಪ್ರತಿಭೆ/ ಯುವ ಪ್ರತಿಭೆ ಹಾಗೂ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಒಬ್ಬರನ್ನು ಸಂಬಂಧಿತ ವಲಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಇಲಾಖೆಯಿಂದ ಪ್ರಮಾಣ ಪತ್ರ ನೀಡಲಾಗುವುದು. ಹಾಗೂ ಬಾಲ ಪ್ರತಿಭೆ / ಕಿಶೋರ ಪ್ರತಿಭೆ/ ಯುವ ಪ್ರತಿಭೆಗಳಲ್ಲಿ ಪ್ರದರ್ಶಿಸಲಿರುವ ಕಲೆಯ ವಿವರವನ್ನು ಪಾಸ್ ಪೋರ್ಟ್ ಸೈಜ್ ಭಾವ ಚಿತ್ರದೊಂದಿಗೆ ಶಾಲಾ/ ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿ ಡಿಸೆಂಬರ್-06ರೊಳಗಾಗಿ ರಾಯಚೂರಿನ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ತಮ್ಮ ಸ್ವ-ವಿವರವನ್ನು ನೀಡಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *