ತಾಳಿಕೋಟಿ: ಮಹಾನ್ ಶಿವಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಕುರಿತು 20 ದಿನಗಳವರೆಗೆ ಪುರಾಣ ಆಲಿಸಿದ್ದೇವೆ ಇದನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯಡಿಯಾಪೂರ ಹೇಳಿದರು. ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡ ದಾನಮ್ಮ ದೇವಿ ಪುರಾಣ ಮಂಗಲ,ಗುರುವಂದನೆ ಹಾಗೂ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಬನೂರಿನ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಐಹಿಕ ಜೀವನದ ಅತಿಯಾದ ಮೋಹದಿಂದ ಬದುಕಿನ ಉದ್ದೇಶವನ್ನು ಮರೆಯಬೇಡಿ, ಗುರುವಿನ ಮಾರ್ಗದರ್ಶನದಲ್ಲಿ ನಡೆದು ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಿ, ಪೂಜ್ಯ ರಾಜೇಂದ್ರ ಶಿವಾಚಾರ್ಯರ ಧರ್ಮ ಕಾರ್ಯಗಳಿಗೆ ಇದೇ ರೀತಿಯ ಸಹಕಾರ ಮುಂದೆಯೂ ಇರಲಿ ಎಂದರು. ಸಾನಿಧ್ಯ ವಹಿಸಿದ ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು ಹಾಗೂ ಕೊಡೆಕಲ್ಲದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಭಕ್ತಿಗೆ ಇನ್ನೊಂದು ಹೆಸರೇ ನಾವದಗಿ ಗ್ರಾಮ.ಪರ್ವತೇಶ್ವರ ಮಠ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ, ಇದರ ಪೀಠಾಧಿಪತಿಗಳಾದ ರಾಜೇಂದ್ರ ಒಡೆಯರ್ ಅವರು ಸರಳ ಸಜ್ಜನ ಶರಣರು. ಈ ಭಾಗದ ಭಕ್ತರನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರ ಭಕ್ತಿ ಮತ್ತು ಪ್ರೀತಿ ಅವರ ಮೇಲೆ ಸದಾ ಇದೇ ರೀತಿಯಾಗಿರಲಿ ಎಂದರು. ಲಕ್ಕುಂಡಿಯ ಶರಣ ಅಪ್ಪಸಾಹೇಬಗೌಡ ಭೀ.ಪಾಟೀಲ ಕುಟುಂಬದಿಂದ ರಾಜೇಂದ್ರ ಒಡೆಯರ್ ಶಿವಾಚಾರ್ಯರಿಗೆ ತುಲಾಭಾರ ಹಾಗೂ ಸರ್ವ ಪೂಜ್ಯರಿಂದ ವಿಶೇಷ ಗುರುವಂದನಾ ಕಾರ್ಯಕ್ರಮ ಜರುಗಿತು.ತುಂಬಗಿ-ಸಾಸನೂರ ಹಿರೇಮಠದ ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ 20 ದಿನಗಳ ಕಾಲ ಸೇವೆ ಗೈದ ಮಹನೀಯರಿಗೆ ಶ್ರೀಮಠದಿಂದ ಗೌರವಿಸಲಾಯಿತು. ಶಾಲಾ ಮಕ್ಕಳು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.ಸಾಹಿತಿ ಬಸವರಾಜ ಗೊರಜಿ ಹಾಗೂ ಡಾ.ಸೋಮಶೇಖರಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಕಾರ್ಯಕ್ರಮ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗುರು ಪರ್ವತೇಶ್ವರರ ಭಾವಚಿತ್ರ ಹಾಗೂ ಧರ್ಮ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು. ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಮಾತೋಶ್ರೀ ಸಾವಿತ್ರಿ ಅಮ್ಮನವರು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಗುರುಲಿಂಗಯ್ಯ ಹಿರೇಮಠ, ಸಿ.ಸಿ.ಕರಡಕಲ್, ಶರಣಗೌಡ ಇಬ್ರಾಹಿಂಪೂರ, ರವಿಧಣಿ ದೇಶಮುಖ,ಎಸ್.ಎಸ್.ಹಾವರಗಿ, ಪುರಾಣಿಕ ರಾಚಯ್ಯ ಹಿರೇಮಠ, ಗ್ರಾಮದ ಗಣ್ಯರು, ಹಿರಿಯರು, ನಾವದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀ ಮಠದ ಭಕ್ತರು ಇದ್ದರು.

