ಮಾನ್ವಿ : ಪಟ್ಟಣದ ಬಸವ ವೃತ್ತದಲ್ಲಿ ರೈತ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ಭಾರಿ ಪ್ರತಿಭಟನೆ ನಡೆಯಿತು. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರೈತರು ಹೇಳತಿರದಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದು, ಹಿಂದಿನ ಸರ್ಕಾರ ನೀಡುತ್ತಿದ್ದ ಸಹಾಯ–ಅನುದಾನಗಳನ್ನು ಹೊಸ ಸರ್ಕಾರ ಮುಂದುವರಿಸದಿರುವುದು ರೈತರ ಬದುಕಿನ ಮೇಲೆ ನೇರ ಹೊಡೆತವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದ ರೈತರು ತಮ್ಮ ಬೇಡಿಕೆಗಳೊಂದಿಗೆ “ರೈತರಿಗೆ ನ್ಯಾಯ ಬೇಕು” ಎಂದು ಘೋಷಣೆ ಕೂಗಿದರು.
ತಾಲೂಕ ಅಧ್ಯಕ್ಷ ವೀರಭದ್ರ ಗೌಡ ಭೋಗವತಿ ಮಾತನಾಡಿ, “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ವಾರ್ಷಿಕ ₹6,000 ಮತ್ತು ರಾಜ್ಯ ಸರ್ಕಾರ ನೀಡುತ್ತಿದ್ದ ₹4,000 ಸೇರಿ ಒಟ್ಟು ₹10,000 ರೈತರ ಕುಟುಂಬಕ್ಕೆ ಮಹತ್ವದ ಆಧಾರವಾಗಿತ್ತು. ವಿದ್ಯಾಸಿರಿ ಮೂಲಕ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್, ಅಮೃತ ಯೋಜನೆಯಡಿ 220 ಕೋಟಿ ರೂಪಾಯಿ ವಿನಿಯೋಗಿಸಿ ಇ–ಪಿಒ ಸ್ಥಾಪನೆ, ಕೇವಲ ₹28,000ಕ್ಕೆ ಹೊಲಗಳಿಗೆ ವಿದ್ಯುತ್ ಸಂಪರ್ಕ, ಸಣ್ಣ ರೈತರಿಗೆ ಕೃಷಿ ಪರಿಕರಗಳ ಸಹಾಯ, ತೊಗರಿ–ಜೋಳ–ಭತ್ತಕ್ಕೆ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿ, ಇವೆಲ್ಲವೂ ಹಿಂದಿನ ಸರ್ಕಾರದ ಮೂಲಕ ರೈತರಿಗೆ ದೊರಕಿದ್ದುವು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳ ಹೊರತಾಗಿ ರೈತರಿಗೆ ನೀಡಬೇಕಿದ್ದ ಮೂಲಭೂತ ಸೌಲಭ್ಯಗಳನ್ನು ಸಂಪೂರ್ಣ ಬದಿಗುತ್ತಿದೆ” ಎಂದು ಕಿಡಿಕಾರಿದರು.
ಅವರು ಮುಂದುವರಿಸಿ, “ತುಂಗಭದ್ರಾ ಡ್ಯಾಂನಲ್ಲಿ 80 TMC ನೀರು ಇದ್ದರೂ ಎರಡನೇ ಬೆಳೆಗೆ ನೀರು ನೀಡದಿರುವುದು ಅತಿದೊಡ್ಡ ಅನ್ಯಾಯ. ಕೃಷಿ ಇಲಾಖೆಯ ಸಹಾಯಧನಕ್ಕೆ ಅಗತ್ಯ ಹಣ ಮೀಸಲಿಡದೇ ರೈತರನ್ನು ಸಂಕಷ್ಟಕ್ಕಿಟ್ಟು, ರಾಜ್ಯ ಸಮ್ಮನ್ ನಿಧಿಯ ₹4,000 ನಿಲ್ಲಿಸಿ, ವಿದ್ಯಾಸಿರಿ ರದ್ದುಪಡಿಸಿ, ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೇ ಧಾನ್ಯ ಸಿಲುಕುವಂತಾಗಿಸಿದ್ದು ಸರ್ಕಾರದ ರೈತ ವಿರೋಧಿ ನಿಲುವಿಗೆ ಸಾಕ್ಷಿಯಾಗಿದೆ. ಬೆಂಬಲ ಬೆಲೆಯಲ್ಲಿ ಖರೀದಿಸಿದ ಧಾನ್ಯದ ಹಣವನ್ನು ಕೂಡ ರೈತರಿಗೆ ಸರಿಯಾದ ಸಮಯದಲ್ಲಿ ನೀಡಲಾಗುತ್ತಿಲ್ಲ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತರು ತಮ್ಮ ಹಕ್ಕೊತ್ತಾಯಗಳನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿದರು. ಎರಡನೇ ಬೆಳೆಗೆ ನೀರು ಒದಗಿಸುವುದು ಅಥವಾ ಸಾಧ್ಯವಿಲ್ಲದಿದ್ದರೆ ಪ್ರತಿ ಏಕರೆಗೆ ₹25,000 ಪರಿಹಾರ ನೀಡುವುದು, ಅತಿವೃಷ್ಠಿಯಿಂದ ಹಾನಿ ಆದ ಬೆಳೆಗಳಿಗೆ ಪರಿಹಾರ, ತುಂಗಭದ್ರಾ ವ್ಯಾಪ್ತಿಯ ರೈತರಿಗೆ ವಿಶೇಷ ಪ್ಯಾಕೇಜ್, ರೈತರಿಗೆ ಉಚಿತ ವಿದ್ಯುತ್ ಸಂಪರ್ಕ, ಹಾಲಿನ ಸಹಾಯಧನ ಹೆಚ್ಚಳ, ತೊಗರಿ–ಜೋಳ–ಭತ್ತ–ಮೆಕ್ಕೆ ಜೋಳಕ್ಕೆ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವುದು, ಮುದ್ರಾಂಕ ಶುಲ್ಕ ಕಡಿತ, ಇ–ಪಿಒಯಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಅಂತ್ಯ ಮತ್ತು ತಪ್ಪಿತಸ್ಥರಿಗೆ ಕಾನೂನು ಕ್ರಮ, ಹತ್ತಿ ಖರೀದಿಗೆ ಅಗತ್ಯ ಮಿಲ್ಲುಗಳ ಒದಗಿಕೆ, ದಾಳಿಂಬೆ ಬೆಳೆಗಾರರಿಗೆ ಹವಾಮಾನ ವೈಪರೀತ್ಯ ಪರಿಹಾರ—ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.
ಪ್ರತಿಬಟನೆಯ ನಂತರ, ರೈತರ ಪರವಾಗಿ ತಹಸಿಲ್ದಾರ್ ಭೀಮರಾಯ ರಾಮಸಮುದ್ರ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. “ರೈತರಿಗೆ ಅನ್ಯಾಯ ಮುಂದುವರಿದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಶರಣಪ್ಪ ಗೌಡ ನಕ್ಕುಂದಿ, ರೈತ ಮೋರ್ಚಾ ಅಧಕ್ಷ ರುದ್ರಗೌಡ ಮಾದ್ಲಾಪುರ್, ಶಿವಲಿಂಗಯ್ಯ ಸ್ವಾಮಿ, ಶರಣಯ್ಯ ಸ್ವಾಮಿ, ಹನುಮೇಶ ನಾಯಕ್ ಗುರುಸಿದ್ದಪ್ಪ ಕಣ್ಣೂರ್, ವೀರೇಶ್ ನಾಯಕ, ರವಿ ಸಾಹುಕಾರ ಆಳ್ದಾಲ್, ಚಂದ್ರು ನಾಯಕ, ಅಂಬರೀಶ್ ನಾಯಕ ಜಾನೇಕಲ್ಲು ಈರಣ್ಣ ನಾಯಕ್, ಬಿ.ಪಕೀರಪ್ಪ ನಾಯಕ್ ಮಡಿವಾಳ, ದುರ್ಗಪ್ಪ ತಡಕಲ, ದೊರೆಬಾಬು, ದೊಡ್ಡಣ್ಣ ಹೂಗಾರ್, ಮಂಜುನಾಥ್ ನಾಯಕ, ಕುಮಾರ್ ಸ್ವಾಮಿ, ಜನಾರ್ದನ್, ವೆಂಕಟೇಶ್ ಕೆ, ಶಿವಕುಮಾರ್ ಕೆ, ಭಾಸ್ಕರ್ ಜಗಲಿ, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತಿ ಇದ್ದರು.

