ಗಿಲ್ಲೆಸೂಗೂರು , ನವೆಂಬರ್ 12: ಸಮೀಪದ ತುಂಗಭದ್ರಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಗಿಲ್ಲೆಸೂಗೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಲಸಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಟಮಾರಿ ಆರೋಗ್ಯ ಕೆಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ್ ಕುಮಾರ ಅವರು ಮಾತನಾಡಿ,ಪ್ರತಿ ವರ್ಷ ನವೆಂಬರ್ 10 ರಂದು ವಿಶ್ವ ಲಸಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ತಡೆಗಟ್ಟಬಹುದಾದ ರೋಗಗಳ ವಿರುದ್ದಮಕ್ಕಳು, ಗರ್ಭಿಣಿಯರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಕಾಲಿಕ ಲಸಿಕಾಕರಣದ ಮಹತ್ವ ತಿಳಿಸುವುದು,ಈ ದಿನಾಚರಣೆಯ ಉದ್ದೇಶ.
ಲಸಿಕೆಗಳು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ತಾಯಿ ಮರಣ ಮತ್ತು ಶಿಶು ಮರಣ ತಡೆ ಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ,ಮಕ್ಕಳಿಗೆ ಜನನದಿಂದಲೇ ನಿಗದಿತ ಲಸಿಕಾ ವೇಳಾಪಟ್ಟಿಯಂತೆ ಎಲ್ಲಾ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಗರ್ಭಿಣಿಯರು ಆರೋಗ್ಯ ಇಲಾಖೆಯ ಸಲಹೆಯಂತೆ ಅಗತ್ಯ ಲಸಿಕೆಗಳನ್ನು ಪಡೆಯಬೇಕು. ಲಸಿಕೆಗಳು ಪೋಲಿಯೊ, ದಡಾರ,ಕಾಮಾಲೆ, ಬಾಲ ಕ್ಷಯ,ಸೇರಿದಂತೆ 12 ಅಪಾಯಕಾರಿ ರೋಗಗಳಿಂದ ರಕ್ಷಣೆ ನೀಡುತ್ತವೆ. ಆದ್ದರಿಂದ ಯಾವುದೇ ಲಸಿಕೆಯನ್ನು ತಪ್ಪಿಸಿಕೊಳ್ಳದೆ ಸಂಪೂರ್ಣ ಲಸಿಕೆ ಪಡೆಯಲು ತಿಳಿಸಿ ಹೇಳಿದರು.
ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ ಅವರು ಮಾತನಾಡಿ, 1974 ರಿಂದ ಈಚೆಗೆ ವರ್ಷಗಳಲ್ಲಿ ಲಸಿಕೆಗಳು ವಿಶ್ವದಾದ್ಯಂತ 150 ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಉಳಿಸಿವೆ, ಮಕ್ಕಳಿಗೆ ಪೂರ್ಣ ಪ್ರಮಾಣದ ಲಸಿಕೆ ಕೊಡಿಸುವ ಮೂಲಕ ಆರೋಗ್ಯವಂತ ಪೀಳಿಗೆಯನ್ನು ನಿರ್ಮಿಸಬೇಕು ಎಂದು ಹೇಳಿದರು. ಅರುಣ್ ಕುಮಾರ ಆರೋಗ್ಯ ನಿರೀಕ್ಷಣ ಅಧಿಕಾರಿ ಇವರು ಲಸಿಕೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಿ, ವೈಜ್ಞಾನಿಕ ಅರಿವು ಬೆಳೆಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಲಸಿಕಾ ಕಾರ್ಡ್‌ ಪರಿಶೀಲಿಸಿ ನಿಗದಿತ ಸಮಯಕ್ಕೆ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮಣಿರಮ್ಮ, ಸುಶೀಲ, ಆಶಾ ಕಾರ್ಯಕರ್ತೆ ಜ್ಯೋತಿ ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *