ಕುಷ್ಟಗಿ: ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಬಲಿಪಾಡ್ಯ ದಿನದಂದು ವಿಶಿಷ್ಟ ಸಂಪ್ರದಾಯವೊಂದು ಮನೆಮನೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿಯೂ ಗೋವಿನ ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ತಯಾರಿಸಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಗ್ರಾಮದ ಮನೆಗಳ ಮುಂದೆ ಗೋವಿನ ಸಗಣಿಯಿಂದ ಸುಂದರವಾಗಿ ರೂಪಿಸಲಾದ ಪಾಂಡವರ ಮೂರ್ತಿಗಳು ಗಮನ ಸೆಳೆಯುತ್ತಿವೆ. ಮಹಿಳೆಯರು ಈ ಸಗಣಿ ಪಾಂಡವರಿಗೆ ನೈವೇದ್ಯ ಅರ್ಪಿಸಿ, ಆರತಿ ಬೆಳಗುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾಭಾರತದ ಪಾಂಡವರನ್ನು ಸ್ಮರಿಸುವ ಈ ಆಚರಣೆಯು ಬಲಿಪಾಡ್ಯ ದಿನದಂದು ನಡೆಯುತ್ತದೆ. ವನವಾಸದ ಸಂದರ್ಭದಲ್ಲಿ ಪಾಂಡವರು ಕಲ್ಲಿನಿಂದ ಕಡಬು ಹಾಗೂ ಮುಳ್ಳಿನಿಂದ ಶಾವಿಗೆಯನ್ನು ತಯಾರಿಸಿ ಊಟ ಮಾಡಿದ್ದರು ಎಂಬ ಪ್ರತೀತಿ ಈ ಆಚರಣೆಯೊಂದಿಗೆ ತಳಕು ಹಾಕಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಗೋವಿನ ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ರೂಪಿಸಿ, ಅವುಗಳ ಸುತ್ತ ಬಿಳಿ ದಾರವನ್ನು ಸುತ್ತಲಾಗುತ್ತದೆ. ಪಾಂಡವರಿಗೆ ಛತ್ರಿ, ಚಾಮರ ಹಾಗೂ ಕಿರೀಟಗಳ ಸಂಕೇತವಾಗಿ ಉತ್ತರಾಣಿ ಕಡ್ಡಿಗಳನ್ನು ಇರಿಸಲಾಗುತ್ತದೆ. ಬಳಿಕ ಬಿಳಿ ಮತ್ತು ಹಳದಿ ಬಣ್ಣದ ಹೂವುಗಳಿಂದ ಅಲಂಕರಿಸಿ, ಅನ್ನ ಹಾಗೂ ಮೊಸರಿನ ನೈವೇದ್ಯವನ್ನು ಅರ್ಪಿಸಲಾಗುತ್ತದೆ.
ಗ್ರಾಮೀಣ ಸಂಸ್ಕೃತಿ, ಧಾರ್ಮಿಕ ನಂಬಿಕೆ ಹಾಗೂ ಪಾರಂಪರಿಕ ಆಚರಣೆಗಳ ಪ್ರತೀಕವಾಗಿರುವ ಸಗಣಿ ಪಾಂಡವರ ಪೂಜೆಯು ಕಡೇಕೊಪ್ಪ ಗ್ರಾಮದಲ್ಲಿ ಮಹಿಳೆಯರ ಭಕ್ತಿಭಾವದೊಂದಿಗೆ ಸಂಭ್ರಮದಿಂದ ನೆರವೇರುತ್ತಿದೆ. ಇಂತಹ ಆಚರಣೆಗಳು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಪಾರ್ವತೆಮ್ಮ ಜಿಗೇರಿ ಹೇಳಿದ್ದಾರೆ.
