*ಸಿಂಧನೂರು, ನವೆಂಬರ್ 07*: ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸದೆ, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾದ ವೈದ್ಯಾಧಿಕಾರಿ ಡಾ. ಉಮೈ ಅಮೇರಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಾಂಕ್ರಾಮಿಕ ರೋಗಗಳ ವಿಭಾಗ ರಾಯಚೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಮತ್ತು ಸನ್‌ರೈಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಡಾ. ಉಮೈ ಅಮೇರಾ ಅವರು, ಪ್ರತಿವರ್ಷ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸುವ ಮೂಲಕ ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಲಾಗುತ್ತದೆ. ದೇಹದಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುತ್ತಾ ದೇಹದ ಇತರ ಭಾಗಗಳಿಗೆ ಹರಡುವ ಸ್ಥಿತಿಯನ್ನು ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ನಿರಂತರ ಆಯಾಸ, ದಣಿವು, ದೇಹದ ತೂಕ ಕಡಿಮೆಯಾಗುವುದು, ಪದೇಪದೇ ಜ್ವರ ಬರುವುದು, ಮಲವಿಸರ್ಜನೆಯಲ್ಲಿ ಏರುಪೇರು, ಕಾರಣವಿಲ್ಲದೆ ರಕ್ತಸ್ರಾವವಾಗುವುದು ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು ಕ್ಯಾನ್ಸರ್‌ನ ಎಚ್ಚರಿಕೆಯ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು, ಪುರುಷರಲ್ಲಿ ಬಾಯಿ, ಅನ್ನನಾಳ, ಶ್ವಾಸಕೋಶ ಹಾಗೂ ಹೊಟ್ಟೆಯ ಕ್ಯಾನ್ಸರ್‌ಗಳು ಕಂಡುಬರುವ ಸಾಧ್ಯತೆ ಹೆಚ್ಚಾಗಿದ್ದು, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಹಾಗೂ ಬಾಯಿ ಕ್ಯಾನ್ಸರ್‌ಗಳ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದರು.
ಕ್ಯಾನ್ಸರ್‌ನ ಪ್ರಮುಖ ಎಚ್ಚರಿಕೆಯ ಲಕ್ಷಣಗಳಾದ ವಾಸಿಯಾಗದ ಗಾಯ, ನಿಲ್ಲದ ರಕ್ತಸ್ರಾವ, ಮಲ ಮತ್ತು ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ, ಎದೆ ಅಥವಾ ದೇಹದ ಇತರ ಭಾಗಗಳಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು, ಆಹಾರ ನುಂಗಲು ತೊಂದರೆಯಾಗುವುದು, ಆಹಾರ ಜೀರ್ಣವಾಗದಿರುವುದು, ಚರ್ಮದ ಮೇಲಿನ ಮಚ್ಚೆ ಅಥವಾ ಗಡ್ಡೆಗಳಲ್ಲಿ ಬದಲಾವಣೆ, ದೀರ್ಘಕಾಲದ ಕೆಮ್ಮು ಹಾಗೂ ಗಂಟಲು ಕಟ್ಟುವಿಕೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಕ್ಯಾನ್ಸರ್ ಕುರಿತು ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಅರಿವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನ್‌ರೈಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಫಾರ್ಮಸಿಸ್ಟ್ ಅಧಿಕಾರಿ ದೀಪು ರಾಯ್, ಪ್ರಯೋಗಾಲಯ ತಂತ್ರಜ್ಞ ಬಿಸ್ವಾಸ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
