ರಾಯಚೂರು: ರಾಯಚೂರು ಗ್ರಾಮೀಣ ಪೊಲೀಸ್ ವೃತ್ತ ವ್ಯಾಪ್ತಿಯ ಎಸ್.ಎಲ್.ಎನ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾಯಚೂರು ಗ್ರಾಮೀಣ ವೃತ್ತದ ಸಿಪಿಐ, ಡಿಸಿಆರ್ಬಿ ವಿಭಾಗದ ಪಿಎಸ್ಐ ಹಾಗೂ ಎಎನ್ಟಿಎಫ್ (ANTF) ಪೊಲೀಸ್ ತಂಡದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು, ಶಿಕ್ಷಣದ ಮೇಲೆ ಬೀರುವ ದುಷ್ಪರಿಣಾಮಗಳು ಹಾಗೂ ಭವಿಷ್ಯದ ಜೀವನದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದಂತಹ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶ ನೀಡಲಾಯಿತು.
ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆಯ ಸಹಭಾಗಿತ್ವ ಪಡೆಯುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
