ರಾಯಚೂರು:ನ:06 ಯಾವುದೇ ವೈದ್ಯ ಪದವಿ ಪಡೆಯದೆ ಜನತೆಗೆ ತಾವು ವೈದ್ಯರೆಂದು ಬಿಂಬಿಸಿ ಚಿಕಿತ್ಸೆ ನೀಡುವ ನಕಲಿ ವೈದ್ಯರ ವಿರುದ್ಧ ಕೆಪಿಎಮ್ಇ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಜರುಗಿಸಿ ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದಿತಾ ಎಮ್ ಎನ್ ತಿಳಿಸಿದ್ದಾರೆ.
ಇತ್ತೀಚಿಗೆ ಲಿಂಗಸೂಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ಮನೆಯಲ್ಲಿಯೇ ಕ್ಲಿನಿಕ್ ಮಾಡಿಕೊಂಡು ಜನರಿಗೆ ತಾವು ವೈದ್ಯ ಪದವಿ ಪಡೆದ ವೈದ್ಯರೆಂದು ಬಿಂಬಿಸಿ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ ಸೀಜ್ ಮಾಡಿ ಕೆಪಿಎಮ್ಇ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಜರುಗಿಸಲು ಕೆಪಿಎಮ್ಇ ಕಾಯ್ದೆಯ ಜಿಲ್ಲಾ ಸಕ್ಷಮ ಪ್ರಾಧಿಕಾರಗಳು ಹಾಗೂ ಜಿಲ್ಲಾಧಿಕಾರಿಗಳು ರವರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
*ಸಾರ್ವಜನಿಕರಲ್ಲಿ ಮನವಿ:*
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯಾವುದೇ ವೈದ್ಯ ಪದವಿ ಪಡೆಯದೆ ಗ್ರಾಮೀಣ ಭಾಗದಲ್ಲಿ ಜನರಿಗೆ ವೈದ್ಯರೆಂದು ಬಿಂಬಿಸುವ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುವುದು.
ನಕಲಿ ವೈದ್ಯರು ಸಾಮಾನ್ಯವಾಗಿ ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟವರು, ಇಲ್ಲವೇ ಖಾಸಗಿ ನರ್ಸಿಂಗ್ ಹೋಮ್, ಖಾಸಗಿ ಅಸ್ಪತ್ರೆ, ಕ್ಲಿನಿಕ್ಗಳಲ್ಲಿ ಸ್ವಚ್ಚತಾ ಕೆಲಸ, ಗಾಯಕ್ಕೆ ಪಟ್ಟಿ ಕಟ್ಟುವುದು ದಂತಹ ಸಣ್ಣಪುಟ್ಟ ಕೆಲಸ ಮಾಡಿ ನಂತರದಲ್ಲಿ ಕೆಲಸ ಬಿಟ್ಟು ತಾವೇ ವೈದ್ಯರೆಂದು ಚಿಕಿತ್ಸೆ ನೀಡುವವರು ಕಂಡು ಬರುತ್ತಿದ್ದು, ಇಂದು ಅತ್ಯಂತ ಗಂಭಿರವಾಗಿದ್ದಾಗಿದೆ. ದಯವಿಟ್ಟು ಸಾರ್ವಜನಿಕರು ತಾವು ಚಿಕಿತ್ಸೆಗೆ ತೆರಳುವ ಪೂರ್ವದಲ್ಲಿ ಚಿಕಿತ್ಸೆ ನೀಡುವ ವೈದ್ಯರು ವೈದ್ಯಕೀಯ ಪದವಿ ಪಡೆದಿರುವ ಬಗ್ಗೆ ವಿಚಾರಿಸಿ ಚಿಕಿತ್ಸೆ ಪಡೆಯಲು ಹಾಗೂ ಯಾರಾದರೂ ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿದ್ದರೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಅಲ್ಲದೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳು ಅಥವಾ ಅಧಿಕೃತ ವೈದ್ಯ ಪದವಿ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಲಿಂಗಸುಗೂರ ತಾಲೂಕಾ ಆರೋಗ್ಯಾಧಿಕಾರಿ ಡಾ ಹನುಮಂತರಾಯ ತಳ್ಳಳ್ಳಿ, ಹಾಗೂ ಇತರರು ಉಪಸ್ಥಿತರಿದ್ದರು.
