ನೈಜ್ಯ ದೆಸೆ :
ಲಿಂಗಸಗೂರು : ನ 07 –
ಅಂತರ್ಜಾತೀಯ ವಿವಾಹವಾಗಿದ್ದಕ್ಕೆ ಮಹಿಳೆ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಜಾತಿ ಆಧಾರಿತ ನಿಂದನೆ, ಕೌಟುಂಬಿಕ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ (AIRWO) ನೇತೃತ್ವದಲ್ಲಿ ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಲಿಂಗಸಗೂರು ಪಟ್ಟಣದ ಗಡಿಯಾರ ಚೌಕದ ಫುಟ್ಪಾತ್ನಲ್ಲಿ ವಾಸಿಸುತ್ತಿರುವ ಶ್ರೀಮತಿ ಅಮೃತ್ (26) ಅವರು 2021ರಲ್ಲಿ ದರ್ಶನ್ ಮೆಹತಾ ಎಂಬುವವರನ್ನು ಅಂತರ್ಜಾತೀಯ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಪತಿ ದರ್ಶನ್ ಮೆಹತಾ ಪತ್ನಿ ಹಾಗೂ ಮಕ್ಕಳನ್ನು ತೊರೆದು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ.
ಕಳೆದ 30 ದಿನಗಳಿಂದ ಅಮೃತ್ ಅವರು ಮಕ್ಕಳೊಂದಿಗೆ ಗಂಡನ ಮನೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದರೂ, ಗಂಡ ಹಾಗೂ ಅವರ ಕುಟುಂಬದವರು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ, ನಾಯಿಯನ್ನು ಬಿಟ್ಟು ಬೆದರಿಸುವಂತಹ ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಇದರಿಂದಾಗಿ ಸಂತ್ರಸ್ತೆ ಹಾಗೂ ಮಕ್ಕಳು ಬೀದಿಯಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ.
ಸಂತ್ರಸ್ತೆ ನೀಡಿದ ದೂರಿನನ್ವಯ ಪತಿ ದರ್ಶನ್ ಮೆಹತಾ ಹಾಗೂ ಆತನ ಕುಟುಂಬದವರ ವಿರುದ್ಧ ತಕ್ಷಣ ಎಫ್ಐಆರ್ (FIR) ದಾಖಲಿಸಿ, ಜಾತಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆ ಹಾಗೂ ಮಕ್ಕಳಿಗೆ ತಕ್ಷಣವೇ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿ, ಗಂಡನ ಮನೆಯಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು. ಪತಿಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಅಗತ್ಯ ಆಹಾರ, ವಸತಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚ ದೊರೆಯುವಂತೆ ಕಾನೂನು ನೆರವು ನೀಡಬೇಕು ಎಂದು ಆಗ್ರಹಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷೆ ಶಿವಮ್ಮ ವಿರಾಪೂರ, ಸಿಪಿಐಎಂನ ಮುಖಂಡರಾದ ಆರ್. ಮಾನಸಯ್ಯ, ದುರುಗಪ್ಪ ಅಗ್ರಹಾರ, ಲಿಂಗಪ್ಪ ಪರಂಗಿ, ಬಸವರಾಜ ಬಾಗಲವಾಡ, ಆದೇಶ ನಗನೂರು, ಹಾಗೂ ಮಹಿಳಾ ಮುಖಂಡರುಗಳಾದ ವಿಜಯರಾಣಿ ಸಿರವಾರ, ರತ್ನ ಕಟ್ಟಿಮನಿ, ಸಂಘಟನೆಯ ಪದಾಧಿಕಾರಿಗಳು ಮತ್ತು ದಲಿತ ಮುಖಂಡರುಗಳು ಭಾಗವಹಿಸಿದ್ದರು.
