ದೇವದುರ್ಗ: ಪಟ್ಟಣದ ಸರ್ಕಾರಿ ನೌಕರರ ಸಂಘದ ತಾಲೂಕು ಜಂಟಿ ಕಾರ್ಯದರ್ಶಿ ಅಭಿಷೇಕ್ ಹುಡೇದ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಮಾನ ಹಾನಿ ಮಾಡಿದ ಸ್ಥಳೀಯ ಪತ್ರಿಕೆ ಹಾಗೂ ಪತ್ರಕರ್ತನ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶುಕ್ರವಾರ ಮನವಿ ಸಲ್ಲಿಸಿದರು.
ಸ್ಥಳೀಯ ಪತ್ರಿಕೆಯ ವರದಿಗಾರ ಸರ್ಕಾರಿ ನೌಕರರಿಗೆ ಸುದ್ದಿ ಬರೆಯುವುದಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾನೆ. ಸರ್ಕಾರಿ ನೌಕರ ಅಭಿಷೇಕ ವಿರುದ್ದ ಸುಳ್ಳು ಸುದ್ದಿ ಪ್ರಕಟಿಸಿದ್ದು, ಯಾವುದೇ ಆಧಾರ, ದಾಖಲೆ ಇಲ್ಲದೆ ಮಾನ ಹರಾಜು ಹಾಕುತ್ತಿದ್ದಾನೆ. ಅಲ್ಲದೆ ಪದೇ ಪದೇ ಆರ್ಟಿಐ ನಲ್ಲಿ ಅರ್ಜಿ ಸಲ್ಲಿಸಿ ಬೆದರಿಕೆ ಹಾಕುತ್ತಿದ್ದಾನೆ. ಜತೆಗೆ ಕೆಲವು ನೌಕರರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ. ಇದರಿಂದ ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡದಂಥ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಕೂಡಲೇ ಸುಳ್ಳು ಸುದ್ದಿ ಪ್ರಕಟಿಸಿದ ಜಲಬಲ ಟೈಮ್ಸ್ ಸ್ಥಳೀಯ ಪತ್ರಿಕೆ ಹಾಗೂ ವರದಿಗಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪದೇ ಪದೇ ಅನಗತ್ಯ ಆರ್ಟಿಐ ಅರ್ಜಿ ಸಲ್ಲಿಸಿ ಕಿರುಕುಳ ನೀಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಕ್ರಮ ಜರುಗಿಸಬೇಕು. ಕಚೇರಿ ಕೆಲಸದ ಸಮಯದಲ್ಲಿ ಕಿರುಕುಳ ನೀಡುವುದನ್ನು ತಪ್ಪಿಸಬೇಕು. ಈ ಬಗ್ಗೆ ಪೊಲೀಸ್ ಹಾಗೂ ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿ, ತಾಲೂಕು ಕಾರ್ಯದರ್ಶಿ ಮಹಾದೇವಪ್ಪ ಪಾಟೀಲ್, ಭೀಮನಗೌಡ ಪಾಟೀಲ್, ಅಭಿಷೇಕ ಹುಡೇದ್, ಪ್ರವೀಣ್ಕುಮಾರ್ ಯಡ್ರಾಮಿ, ಪ್ರಕಾಶ ಇತರರಿದ್ದರು.
