ಸಿಂಧನೂರು ನ.೬

ತಾಲೂಕಿನ ಶಾಂತಿನಗರ (ಹಂಚಿನಾಳ ಕ್ಯಾಂಪ್) ದಲ್ಲಿ ಬುಧವಾರದಂದು ಶ್ರಾವಣಿ ತಂ.ಹನುಮಂತ ಕುಂಬಾರ
೫ ವರ್ಷದ ಹೆಣ್ಣು ಮಗುವಿಗೆ ಬೀದಿ ನಾಯಿಗಳು ಕಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೇ ವರ್ಷದಲ್ಲಿ ಕಳೆದ ಜುಲೈ ತಿಂಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸದ ರಕ್ಕಸ ದಾಳಿಗೆ ೧೮ ತಿಂಗಳ ಹಸುಗೂಸು ಬಲಿಯಾದ ಹೃದಯ ವಿದ್ರಾವಕ ಘಟನೆಯೊಂದು ಜರುಗಿಹೋಗಿ ಶಾಂತವಾಗಿದ್ದ ಶಾಂತಿನಗರದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು.

ಈ ಘಟನೆಯನ್ನು ಮರೆಯುವ ಮುನ್ನವೇ ಮತ್ತೊಂದು ೫ ವರ್ಷದ ಹೆಣ್ಣು ಮಗವಿನ ಮೇಲೆ ಬೀದಿ-ನಾಯಿಗಳು ಮುಗಿಬಿದ್ದು ಕಾಲಿಗೆ ಕೈಗೆ ಕಡಿದ ಪರಿಣಾಮ ತುಂಬಾ ಗಾಯಗಳಾಗಿ ನರಳಾಡುತ್ತಿದೆ. ಮಗುವಿನ ಪಾಲಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ, ಶಾಂತಿನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವ ಮಕ್ಕಳು, ವೃದ್ಧರು, ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಬೀದಿ ನಾಯಿಗಳಿಂದ ದಿನವೂ ತೊಂದರೆಯಾಗುತ್ತಿದೆ.

ಈ ಬೀದಿನಾಯಿಗಳ ಉಪಟಳದ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಸೂಕ್ತವಾದ ಕ್ರಮ ಕೈಗೊಳ್ಳುತ್ತಿಲ್ಲ. ಜನರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸಮರ್ಪಕ ಉತ್ತರ ನೀಡದೆ, ಮೌನ ವಹಿಸುತ್ತಿದ್ದು, ಇದು ಶಾಂತಿನಗರದ ಸಾರ್ವಜನಿಕರಿಗೆ ಅಸಮಾಧಾನ ತರಿಸಿದೆ. ಇದೇ ರೀತಿ ಇದೇ ವರ್ಷದಲ್ಲಿ ಈ ಕ್ಯಾಂಪಿನಲ್ಲಿ ಮೂರು ಪ್ರಕರಣ ಆಗಿವೆ. ಕಳೆದ ಶನಿವಾರ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವೃದ್ದನಿಗೂ ಬೀದಿ-ನಾಯಿಗಳು ಕಚ್ಚಿವೆ. ಆದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ.
ಶಾಂತಿನಗರದ ಸಾರ್ವಜನಿಕರ ಸುರಕ್ಷತೆಗೆ ಹೊಣೆ ಯಾರು.? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆ ಯಾವಾಗ?
ಎಂದು ಪ್ರಶ್ನಿಸಿದರು.

ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು, ನಗರಸಭೆ ಹಾಗೂ ಗ್ರಾ.ಪಂಚಾಯಿತಿ ಅಧಿಕಾರಿಗಳು, ಎಚ್ಚೆತ್ತುಕೊಂಡು ಶಾಂತಿನಗರದಲ್ಲಿ ಶಾಂತಿ ಕಾಪಾಡಲು ಮತ್ತು ಮಕ್ಕಳು, ವೃದ್ದರು, ಬೈಕ್ ಸವಾರರು ನಾಯಿಗಳ ಭಯವಿಲ್ಲದೆ ತಿರುಗಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ, ಸಿಂಧನೂರಿನ ನಗರಸಭೆ ಮುಂದೆ ಶಾಂತಿನಗರದ ಸಾರ್ವಜನಿಕರೆಲ್ಲರೂ ಸೇರಿ
ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

 

 

 

Leave a Reply

Your email address will not be published. Required fields are marked *