ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳು ನೆಲೆಸಬೇಕಾದ ಸಂದರ್ಭದಲ್ಲಿ ಜಾತಿಯ ಆಧಾರದ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಪಕ್ಷದ ರಾಯಚೂರು ಜಿಲ್ಲಾಧ್ಯಕ್ಷ ಶೇಖ್ ಫರೀದ್ ಉಮರಿ ತಿಳಿಸಿದ್ದಾರೆ.

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಜಾತಿ, ಧರ್ಮ, ಭಾಷೆ ಹಾಗೂ ವರ್ಗದ ಭೇದವಿಲ್ಲದೆ ಸಮಾನತೆಯ ಹಕ್ಕು, ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಿದೆ. ಆದರೆ ಇಂದಿಗೂ ದಲಿತ ಸಮುದಾಯದ ಮೇಲೆ ಹಲ್ಲೆ, ದೌರ್ಜನ್ಯ ಹಾಗೂ ಅವಮಾನಕಾರಿ ಘಟನೆಗಳು ನಡೆಯುತ್ತಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಿಡಿಗೋಳ ಗ್ರಾಮದಲ್ಲಿ ನಡೆದಿರುವ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಗುರುತಿಸಿ, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವುದರ ಜೊತೆಗೆ, ಅವರಿಗೆ ನ್ಯಾಯಬದ್ಧ ಪರಿಹಾರ, ವೈದ್ಯಕೀಯ ಹಾಗೂ ಕಾನೂನು ನೆರವು ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನ.8ರ ಬೈಕ್ ರ್ಯಾಲಿಗೆ ಬೆಂಬಲ

ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ದಲಿತ ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ನವೆಂಬರ್ 8ರಂದು ಸಿಂಧನೂರಿನಿಂದ ತಿಡಿಗೋಳ ಗ್ರಾಮದವರೆಗೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಸೂಚಿಸಿದೆ.

ಸಾಮಾಜಿಕ ಅನ್ಯಾಯ, ಜಾತಿ ತಾರತಮ್ಯ ಮತ್ತು ದೌರ್ಜನ್ಯದ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ದಲಿತ ಸಮುದಾಯದ ಸ್ವಾಭಿಮಾನ, ಹಕ್ಕು ಮತ್ತು ಘನತೆಯ ರಕ್ಷಣೆಗೆ ಎಲ್ಲ ಪ್ರಜಾಪ್ರಭುತ್ವ ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗಟ್ಟಿನಿಂದ ನಿಲ್ಲಬೇಕು. ಸಂತ್ರಸ್ತರಿಗೆ ನ್ಯಾಯ ದೊರೆಯುವವರೆಗೂ ನ್ಯಾಯಪರ ಧ್ವನಿ ಮೊಳಗಬೇಕು ಎಂದು ಶೇಖ್ ಫರೀದ್ ಉಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇಖ್ ಫರೀದ್ ಉಮರಿ ಜಿಲ್ಲಾಧ್ಯಕ್ಷರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ,ರಾಯಚೂರು.

Leave a Reply

Your email address will not be published. Required fields are marked *