ತಾಳಿಕೋಟಿ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಅಮ್ಮಾ ಫೌಂಡೇಶನ್ ಕೈಗೊಂಡಿರುವ ಉಚಿತ ಕೌಶಲ್ಯ ತರಬೇತಿ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಹಿರಿಯ ವೈದ್ಯೆ ಡಾ. ಸರೋಜಾ ವಿ. ಕಾರ್ಚಿ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸ್ಥಳೀಯ ಅಮ್ಮಾ ಫೌಂಡೇಶನ್ (ರಿ.) ವತಿಯಿಂದ ಆಯೋಜಿಸಿದ್ದ ವಿವಿಧ ಕೌಶಲ್ಯ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಕೆ. ಪಿಯು ಮಹಿಳಾ ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಹಿರೇಮಠ ಹಾಗೂ ಪಿಎಸ್ಐ ಜ್ಯೋತಿ ಕೋತ ಮಾತನಾಡಿ, ಮಹಿಳೆಯರು ಕುಟುಂಬದ ಜವಾಬ್ದಾರಿಗಳೊಂದಿಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡು ಸ್ವಂತ ದುಡಿಮೆಯ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು. ಮಹಿಳಾ ಸಬಲೀಕರಣಕ್ಕಾಗಿ ಅಮ್ಮಾ ಫೌಂಡೇಶನ್ ನಡೆಸುತ್ತಿರುವ ಪ್ರಯತ್ನಗಳಿಗೆ ಸಮಾಜದ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಅಧ್ಯಕ್ಷೆ ಬಸಮ್ಮ ಮಣ್ಣೂರ ಮಾತನಾಡಿ, ಮಹಿಳೆಯರು ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಜೀವನದ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಯಾವುದೇ ವ್ಯಾಪಾರಿ ಉದ್ದೇಶವಿಲ್ಲದೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಹಾಗೂ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಫೌಂಡೇಶನ್ನ ಮುಖ್ಯ ಆಶಯವಾಗಿದೆ. ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಫೌಂಡೇಶನ್ ವತಿಯಿಂದ ಉಚಿತವಾಗಿ ಆಯೋಜಿಸಿದ್ದ ಹೊಲಿಗೆ ತರಬೇತಿ ಪಡೆದ 50 ಮಹಿಳೆಯರು, ಕಂಪ್ಯೂಟರ್ ತರಬೇತಿ ಪಡೆದ 15 ಮಹಿಳೆಯರು ಹಾಗೂ ರಂಗೋಲಿ ತರಬೇತಿ ಪಡೆದ 20 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಫೌಂಡೇಶನ್ ಆಡಳಿತ ಮಂಡಳಿ ಸದಸ್ಯೆಯರಾದ ಸುಮಂಗಲಾ ಕೋಳೂರ, ಸುರೇಖಾ ಬಿಳೆಭಾವಿ, ಸುರೇಖಾ ಸಾಲಂಕಿ, ಗುರುಬಾಯಿ ಮಣೂರ, ಡಾ. ಅನಿತಾ ಸಜ್ಜನ, ಗೀತಾ ಪತ್ತಾರ, ಡಾ. ಗಂಗಾಂಬಿಕಾ ಪಾಟೀಲ, ರೇಣುಕಾ ಕಾರಜೋಳ, ಜ್ಯೋತಿಬಾ ಕೊಡುಗೆ, ಲಿಂಗೇಶಯ್ಯ ಸೇರಿದಂತೆ ತರಬೇತಿ ಪಡೆದ ಫಲಾನುಭವಿಗಳು ಉಪಸ್ಥಿತರಿದ್ದರು.
