ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೇಡರ ಕಾರಲು ಕುಂಟೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಗ್ರಾಮ ಘಟಕವನ್ನು ಇಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಚಾಲು ದೀಕ್ಷೆ ಸ್ವೀಕರಿಸುವ ಮೂಲಕ ರೈತ ಸಂಘದ ಸಂಘಟನೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು. ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಸಂಘಟಿಸುವುದು, ರೈತ ಕುಟುಂಬಗಳ ಸಮಸ್ಯೆಗಳಿಗೆ ಧ್ವನಿಯಾಗುವುದು ಹಾಗೂ ರೈತಾಪಿ ವರ್ಗದ ಹಕ್ಕುಗಳಿಗಾಗಿ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ ಮಹಿಳಾ ಗ್ರಾಮ ಘಟಕವನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಮರಳಿ ಸುಲ್ತಾನಪುರ ಅವರು ಉಪಸ್ಥಿತರಿದ್ದರು.
ರೈತ ಸಂಘದ ಜಿಲ್ಲಾಧ್ಯಕ್ಷರಾದ ರಾಮಯ್ಯ ಜವಳಗೇರಾ, ಮಸ್ಕಿ ತಾಲೂಕು ಗೌರವಾಧ್ಯಕ್ಷರಾದ ಲಾಲಸಾಬ ನಾಡಗೌಡ ಪೂಜಾರಿ, ತಾಲೂಕು ಅಧ್ಯಕ್ಷರಾದ ವೆಂಕಟೇಶ ಸಂತೆಕೆಲ್ಲೂರು, ಮಸ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸಯ್ಯ ರೇವಣಿಮಠ, ತಾಲೂಕು ಮಹಿಳಾ ಪದಾಧಿಕಾರಿಗಳಾದ ಬಸ್ಸಮ್ಮ ಕೆ. ಬಸಾಪುರ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ಕೇವಲ ಕುಟುಂಬದ ಜವಾಬ್ದಾರಿಗೆ ಸೀಮಿತವಾಗದೆ, ರೈತರ ಹಕ್ಕುಗಳು, ಕೃಷಿ ಸಮಸ್ಯೆಗಳು, ಮಹಿಳೆಯರ ಸಬಲೀಕರಣ ಹಾಗೂ ಗ್ರಾಮೀಣ ಜನರ ನ್ಯಾಯಯುತ ಬೇಡಿಕೆಗಳಿಗಾಗಿ ಸಂಘಟಿತ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂಬ ಸಂದೇಶ ವ್ಯಕ್ತವಾಯಿತು.
ನೂರಾರು ಮಹಿಳೆಯರು ಒಂದೇ ವೇದಿಕೆಯಲ್ಲಿ ಸೇರಿ ಚಾಲು ದೀಕ್ಷೆ ಸ್ವೀಕರಿಸಿರುವುದು ಗ್ರಾಮದಲ್ಲಿ ರೈತ ಸಂಘಟನೆಯ ಬೆಳವಣಿಗೆಗೆ ಹೊಸ ಶಕ್ತಿ ತುಂಬಿದಂತಾಗಿದೆ. ಮಹಿಳಾ ಘಟಕದ ಸ್ಥಾಪನೆಯಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಸಂಘಟನಾ ಶಕ್ತಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
