ಸಿಂಧನೂರು: ನ.2 : ವಕೀಲಿ ವೃತ್ತಿಯಲ್ಲಿ ಘನತೆ, ಗೌರವ, ಯಶಸ್ಸು ಸಿಗಬೇಕಾದರೆ, ನ್ಯಾಯವಾದಿಗಳು ನ್ಯಾಯಾಧೀಶರಿಗೆ ಕಲಾಪದಲ್ಲಾಗಲಿ, ನ್ಯಾಯಾಲಯದ ಹೊರಗಡೆಯಾಗಲಿ, ಗೌರವವನ್ನು ನೀಡಿದರೆ ಅವರಿಗೆ ನೀಡುವ ಗೌರವದಿಂದ ಸಮಾಜ ಅಥವಾ ಕಕ್ಷಿದಾರರ ಮುಂದೆ ನಮ್ಮ ಗೌರವವೂ ಹೆಚ್ಚುತ್ತದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ ಜಿ ಅಭಿಪ್ರಾಯ ಪಟ್ಟರು.

ಸಿಂಧನೂರು ನ್ಯಾಯಾಲಯದ ವಕೀಲರ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವಕೀಲರ ಒಕ್ಕೂಟದ ಪ್ರಥಮ ತಾಲೂಕು ಮಟ್ಟದ ಸಮ್ಮೇಳನನ್ನು ಉದ್ದೇಶಿಸಿ ಮಾತನಾಡಿದ ಅವರು, ಅಖಿಲ ಭಾರತ ವಕೀಲರ ಒಕ್ಕೂಟವು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಅಖಿಲ ಭಾರತ ವಕೀಲರ ಒಕ್ಕೂಟವು ನಡೆಸಿಕೊಂಡು ಹೋಗುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸ್ಥಳೀಯ ವಕೀಲರ ಸಂಘ ಸಹಕಾರದ ಜೊತೆಗೆ ನಡೆಸಿದರೆ ವಕೀಲರ ಸಂಘ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟ ಗಟ್ಟಿಗೊಳ್ಳುತ್ತದೆ ಎಂದರು.

ಬಾರ್ ಮತ್ತು ಬೆಂಚ್ ಎರಡು ಒಂದಕ್ಕೊಂದು ಅವಿನಾವಭಾವ ಸಂಬಂಧವನ್ನು ಹೊಂದಿವೆ. ಎತ್ತಿನ ಬಂಡಿಗೆ ಯಾವ ರೀತಿ ಎರಡು ಚಕ್ರಗಳ ಮುಖ್ಯವೋ ಅದೇ ರೀತಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು ನ್ಯಾಯಾಲಯ ಮುಖ್ಯ. ನಮ್ಮ ನಮ್ಮ ಸಮಸ್ಯೆಗಳ ಮಧ್ಯೆ ನ್ಯಾಯಕ್ಕಾಗಿ ಬರುವ ಕಕ್ಷಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಕೀಲರು ಧರಿಸುವ ಬಟ್ಟೆಗಳ ಮೇಲೆ ಕಕ್ಷಿದಾರರು ವಕೀಲರ ಪೀಸ್‌ನ್ನು ನಿರ್ಧಸುತ್ತಾರೆ. ವಕೀಲರಿಗೆ ಮುಖ್ಯವಾಗಿ ಧರಿಸುವ ಬಟ್ಟೆಗಳ ಮೇಲೆ ಕಾಳಜಿ ಇರಬೇಕು ಜೊತೆಗೆ ಶಿಸ್ತಿನ ಸಿಪಾಯಿಯಂತೆ ಇದ್ದಾಗ ಮಾತ್ರ ಒಬ್ಬ ಒಳ್ಳೆಯ ವಕೀಲನಾಗಲು ಸಾಧ್ಯ. ಕಿರಿಯ ವಕೀಲರು ಕೋರ್ಟಗೆ ಆಗಮಿಸುವಾಗ ಶುಭ್ರವಾದ ಬಟ್ಟೆ, ಕೋರ್ಟ್, ಕಾಲಿಗೆ ಶೂಗಳನ್ನು ತಪ್ಪದೇ ಧರಿಸಬೇಕು. ನ್ಯಾಯಾಲಯದ ಕಲಾಪಗಳಲ್ಲಿ ನ್ಯಾಯಮೂರ್ತಿಗಳ ಮುಂದೆ ನಾವು ಮಂಡಿಸುವ ವಿಷಯಗಳು ವಿನಯ ಭರಿತವಾಗಿರಬೇಕೆ ವಿನಹ ರೋಷ, ಕೋಪದಿಂದ ಕೂಡಿರಬಾರದು ಎಂದರು.

ನನಗೆ ಸಿಂಧನೂರು ತುಂಬಾ ಅಚ್ಚು ಮೆಚ್ಚು, ನಾನು ಚುನಾವಣೆಯಲ್ಲಿ ಬಹುಮತ ಪಡೆಯಲು ಸಿಂಧನೂರು ವಕೀಲರ ಸಂಘ ಕಾರಣ. ಚುನಾವಣೆಯಲ್ಲಿ ನಾನು ಸೋಲುತ್ತೇನೆ ಎಂದು ಹಲವಾರು ಹಿರಿಯ ವಕೀಲರು ಹೇಳಿದರು ಆದರೆ ಮತ ಎಣಿಕೆಯ ಸಂದರ್ಭದಲ್ಲಿ ಸಿಂಧನೂರು ವಕೀಲರ ಮತಗಳ ಎಣಿಕೆಯ ನಂತರ ಒಟ್ಟು ಮತಗಳ ಅಂತರದಲ್ಲಿ ನಾನು ಎಲ್ಲರಿಗಿಂತಲೂ ಮುಂದೆ ಸಾಗಿ ಆಯ್ಕೆಗೊಂಡಿದ್ದೇನೆ ಎಂದ ಅವರು ಸಿಂಧನೂರು ಸಂಘಕ್ಕೆ ನಾನು ಸದಾ ಚಿರಋಣಿ ಆಗಿರುತ್ತೇನೆ ಎಂದರು.

ಸಿಂಧನೂರು ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ ಎ ಅವರು ಮಾತನಾಡಿ, ನಾನು ಕಿರಿಯ ವಕೀಲರಾಗಿ ಸಾಕಷ್ಟು ತರಬೇತಿ ಹೊಂದಿದ್ದೇನೆ. ಕಿರಿಯ ವಕೀಲರ ಶ್ರೇಯಾಭಿವೃದ್ಧಿಗೆ ನಾನು ಸೇವೆ ಮಾಡಲು ಸದಾ ಸಿದ್ಧನಿದ್ದೇನೆ. ನಿಮ್ಮ ಸಂಘಗಳಿಂದ ಕಾನೂನು ಕಾರ್ಯಗಾರ ನಡೆಸಿದರೆ ಅದರಲ್ಲಿ ನಾನು ಪಾಠ ಮಾಡಲು ಸಿದ್ಧನಿದ್ದೇನೆ ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವಕೀಲ ಶಶಿಧರ್‌ಗೌಡ ಕೆಲ್ಲೂರು ಮಾತನಾಡಿ ಐಲು ಹಾಗೂ ವಕೀಲರ ಪರಿಷತ್ತು ಕೂಡಿ ವಕೀಲರ ಸಮಸ್ಯೆಗಳ ಪರಿಹಾರದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಬದಲಾವಣೆ ಮಾಡಬೇಕಾಗಿದೆ. ಈಗಾಗಲೇ ನಾವು ಕಂಡAತೆ ನ್ಯಾಯಾಧೀಶರ ಮೇಲೆ ಹಲ್ಲೆ, ವಕೀಲರ ಮೇಲೆ ಹಲ್ಲೆ ಪ್ರಕರಣ ದಾಖಲು ಮಾಡುವುದು ಸೇರಿದಂತೆ ಅನೇಕ ಪ್ರಕರಣಗಳು ನಡೆಯುತ್ತಿವೆ ಇವುಗಳ ಬಗ್ಗೆ ಒಕ್ಕೂಟವು ಸೂಕ್ತ ಸಲಹೆ ಸೂಚನೆಗಳ ಮೂಲಕ ಪರಿಹರಿಸಬೇಕಿದೆ ಅದನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ: ಹಿರಿಯ ಶ್ರೇಣಿ ನ್ಯಾಯಾಧೀಶ ಲಕ್ಷ್ಮಿಕಾಂತ್ ಮಿಸ್ಕಿನ್, ಪ್ರಧಾನ ನ್ಯಾಯಾಧೀಶೆ ರೂಪ ಸಿ ವಗ್ಗ, ಒಂದನೇ ಹೆಚ್ಚುವರಿ ನ್ಯಾಯಾಧೀಶೆ ಸರಸ್ವತಿ ಹೊಟ್ಕರ್, ಎರಡನೇ ಹೆಚ್ಚುವರಿ ನ್ಯಾಯಾಧೀಶ ವಿಜಯ್ ಕುಮಾರ್ ಬುದ್ರಿ, ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆರ್.ಕೆ.ದೇಸಾಯಿ, ತಾಲೂಕು ಅಧ್ಯಕ್ಷ ಅಬ್ದುಲ್ ಗನಿಸಾಬ, ಗೌರವಾಧ್ಯಕ್ಷ ಜಿಎಸ್‌ಆರ್‌ಕೆ ರೆಡ್ಡಿ, ಉಪಾಧ್ಯಕ್ಷ ಶೇಖರಪ್ಪ ದುಮತಿ, ಕಾರ್ಯದರ್ಶಿ ಕೃಷ್ಣ ಬಿ.ಎಂ, ಖಜಾಂಚಿ ಸೈಯದ್ ರಬಾನಿ ಜಾಗೀರದಾರ್, ಸಿಂಧನೂರು ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ದುರ್ಗೇಶ, ಖಜಾಂಚಿ ಶೇಖರಪ್ಪ ಗಡೇದ್, ಸಹ ಕಾರ್ಯದರ್ಶಿ ಹೀನಾ ಅಂಬ್ರಿನ್, ಅಮರೇಶ ಪೋತ್ನಾಳ ಗುಜ್ಜಲ್ ವಕೀಲರು, ಸೇರಿದಂತೆ ಹಿರಿಯ, ಕಿರಿಯ ವಕೀಲರು ಇದ್ದರು.

Leave a Reply

Your email address will not be published. Required fields are marked *