ಕವಿತಾಳ -: ಸಮೀಪದ ಗೂಗೆಬಾಳ ಗ್ರಾಮದಲ್ಲಿ ಅಪ್ರಕಟಿತ ಜೈನರ ಧರ್ಮದ ನಿಶದಿ ಶಿಲ್ಪ ಶಾಸನ ಪತ್ತೆಯಾಗಿದೆ. ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಶಾಸನದ ಮಾಹಿತಿ ಸಂಗ್ರಹಿಸಿದ ಸಂಶೋಧಕ ಮತ್ತು ಇತಿಹಾಸ ಉಪನ್ಯಾಸಕ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿ ಅವರು ಈ ಕುರಿತು ವಿವರಣೆ ನೀಡಿದರು.
ತಾಲ್ಲೂಕು ಕೇಂದ್ರ ಮಸ್ಕಿ ಪಟ್ಟಣದಿಂದ 18 ಕಿ.ಮೀ ದೂರದ ಉತ್ತರ ದಿಕ್ಕಿನಲ್ಲಿರುವ ಗೂಗೆಬಾಳ ಗ್ರಾಮದಲ್ಲಿ ಈಗಾಗಲೇ ಎರಡು ಶಾಸನಗಳು ಪ್ರಕಟವಾಗಿವೆ. ಮೊದಲನೆ ಶಾಸನ ಕ್ರಿ.ಶ. 10ನೇ ಶತಮಾನಕ್ಕೆ ಸೇರಿದ ರಾಷ್ಟ್ರಕೂಟ ಅರಸರ ಶಾಸನ, ಎರಡನೇ ಶಾಸನ ಕಳಚೂರಿ ಅರಸ ರಾಯಮುರಾರಿ ಸೋವಿ ದೇವನಿಗೆ ಸೇರಿದ್ದು ಅದು ಕ್ರಿ.ಶ. 1174ರ ಕಾಲಕ್ಕೆ ಸೇರಿರುತ್ತದೆ. ಈ ಗ್ರಾಮದಲ್ಲಿ ಲಿಂಗಾವಧೂತರ ದೇವಸ್ಥಾನ, ಕಾಶೀ ವಿಶ್ವನಾಥ, ಮಾರುತಿ, ಎರಡು ದುರ್ಗಾದೇವಿ ದೇವಸ್ಥಾನ, ತಾಯಮ್ಮ, ಕೆಂಚಮ್ಮ, ಶೀಲವಂತಿ ದೇವಿ, ಎರಡು ಬನ್ನಿ ಮಹಾಂಕಾಳಿ ಮತ್ತಿತರ ದೇವಸ್ಥಾನಗಳಿವೆ. ಅವುಗಳೊಂದಿಗೆ ಗ್ರಾಮದಲ್ಲಿ ಕ್ರಿ.ಶ. 17-18ನೇ ಶತಮಾನದ 8 ವೀರಗಲ್ಲುಗಳು, 1 ವೀರ ಮಹಾಸತಿ ಶಿಲ್ಪ, ಎರಡು ನಂದಿ ವಿಗ್ರಹ, ಸೂರ್ಯನಾರಾಯಣ ಪೀಠ ಭಾಗ, ಸಪ್ತಮಾತೃಕೆಯರ ಶಿಲ್ಪ, ಗಣೇಶ ಶಿಲ್ಪ, ಕಂಡು ಬರುತ್ತವೆ.
ಗ್ರಾಮದ ಊರ ಹೊರಗಿನ ಸಣ್ಣ ನಿಂಗಪ್ಪ ಭೀಮರಾಯಪ್ಪ ಯರಮದೊಡ್ಡಿ ಅವರ ಹುಣಸೆ ಮರದ ಜಮೀನಿನಲ್ಲಿ ಕಪ್ಪು ಶಿಲೆಯ ಅಪ್ರಕಟಿತ ನಿಶದಿ ಶಿಲ್ಪ ಶಾಸನ ಪತ್ತೆಯಾಗಿದೆ. ಅದು ಮೂರುವರೆ ಅಡಿ ಎತ್ತರ ಒಂದೂವರೆ ಅಡಿ ಅಗಲ ಇದೆ, ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿದೆ. ಶಾಸನದ ಮೇಲ್ಬಾಗದಲ್ಲಿ ನಿಶದಿ ಶಿಲ್ಪ ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿದೆ. ವಿಗ್ರಹದ ಮೇಲ್ಬಾಗದಲ್ಲಿ ಮೂರು ಪೂರ್ಣ ಕುಂಭಗಳಿವೆ. ಅದರ ಕೆಳ ಭಾಗದಲ್ಲಿ 5 ಸಾಲಿನ ಶಾಸನವಿದ್ದು ಸ್ವಸ್ತಿ ಶ್ರೀ ಕೊಂಡಾ ಕುಂದನ್ವಯ, ಬಸದಿ ಅನ್ವಯ, ದ ದೇಸಿಯ ಗಣದ ವೋ. ಕ್ಷ ಜೋಗಬ್ಬೆ ಕಂತಿಶಿ, ಶಿಯರ ಶಾಂತಬ್ಬೆ ಕಂತಿಯರು ಎಂದು ಮಾಹಿತಿ ಉಲ್ಲೇಖಿಸಲಾಗಿದೆ. ಅದು ಕ್ರಿ.ಶ. 10-11 ನೇ ಶತಮಾನಕ್ಕೆ ಸೇರಿದ ಲಿಪಿಯಲ್ಲಿದೆ.
ಇದುವರೆಗೂ ಜಿಲ್ಲೆಯಲ್ಲಿ ಜೈನ ಧರ್ಮಕ್ಕೆ ಸಂಬಂಧಿ ಸಿದ 24 ಊರುಗಳಲ್ಲಿ ಕುರುಹುಗಳು ಕಂಡು ಬಂದಿದ್ದು ಪ್ರಸ್ತುತ ಗೂಗೆಬಾಳ ಗ್ರಾಮವು 25ನೇ ಗ್ರಾಮವಾಗಿದೆ ಎಂದು ಚನ್ನಬಸ್ಸಪ್ಪ ಮಲ್ಕ೦ದಿನ್ನಿ ತಿಳಿಸಿದರು.
ಈ ಕ್ಷೇತ್ರ ಕಾರ್ಯದಲ್ಲಿ ರಮೇಶ ಯರಮದೊಡ್ಡಿ, ವಿನಯಕುಮಾರ ಸ್ವಾಮಿ ಹಿರೇಮಠ, ಅಂಬು ಡಿ.ಜಿ. ಶಿವಕುಮಾರ, ಚಂದ್ರಕಾಂತ, ವೀರನಗೌಡ, ಹನುಮಗೌಡ ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು ಮತ್ತು ಪ್ರೊ.ಜಿ.ಮಂಜುನಾಥ ಅವರು ಶಾಸನವನ್ನು ತಿದ್ದುಪಡಿ ಮಾಡಿ ನೀಡಿದರು ಎಂದು ಮಾಹಿತಿ ನೀಡಿದರು.

