ಅರಕೇರಾ : ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ರೈತರು ಬಿತ್ತನೆ ಮಾಡಿದ ಹತ್ತಿ, ಸಜ್ಜೆ, ಹೆಸರು ಸೇರಿದಂತೆ ಇತರೆ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಮೇ ಕೊನೆಯ ವಾರ ಮತ್ತು ಜೂನ್ ಮೊದಲ ವಾರದಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಜಮೀನು ಉಳುಮೆ ಮಾಡಿ ಬಿತ್ತನೆ ಮಾಡಿದ್ದರು. ಬೀಜ ಚಿಗುರೊಡೆದು ಹಸಿರಾಗಿದ್ದ ಬೆಳೆ ಈಗ ನೀರಿನ ಅಭಾವದಿಂದ ಬಾಡುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಮಳೆ ಬಾರದೇ ಇದ್ದರೆ ಇಡೀ ಬೆಳೆಯೇ ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಾದ್ಯಂತ ಶೇಕಡಾ 75 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಬಿತ್ತನೆಯಾಗಿ 4 ರಿಂದ 5 ವಾರ ಕಳೆದಿದ್ದು, ಈ ಹಂತದಲ್ಲಿ ಬೆಳೆಗಳಿಗೆ ಮಳೆ ಅತ್ಯವಶ್ಯಕವಾಗಿದೆ. ಆದರೆ ಮಳೆ ಇಲ್ಲದ ಕಾರಣ ಚಿಗುರೊಡೆದು ನಿಂತ ಹತ್ತಿ ಮತ್ತು ಇತರೆ ಬೆಳೆಗಳು ಒಣಗುತ್ತಿವೆ.
ಕೊಳವೆಬಾವಿ ಆಧಾರಿತ ನೀರಾವರಿ ಇರುವ ಹೊಲಗಳನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ಹೊಲಗಳಲ್ಲಿ ಬೆಳೆಗಳಿಗೆ ನೀರಿಲ್ಲದೆ ಭೂಮಾತೆ ಬಣಗುಟ್ಟುತ್ತಿದೆ.
ಇನ್ನೂ ಬರಗಾಲದ ಛಾಯೆಯಿಂದ ಹೊರಬಾರದ ರೈತ ಸಮುದಾಯಕ್ಕೆ ಈ ಬಾರಿಯ ಮಳೆ ಕೊರತೆ ಮತ್ತಷ್ಟು ಆತಂಕ ತಂದಿದೆ.
ಮಳೆಗಾಗಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ರೈತರು ಮತ್ತು ಗ್ರಾಮಸ್ಥರು ಪೂರ್ವಜರ ಸಂಪ್ರದಾಯದಂತೆ ವಿಶೇಷ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಅವರ ಪ್ರಾರ್ಥನೆಗೆ ಮಳೆ ಮಾತ್ರ “ಜಪ್ಪಯ್ಯ” ಎನ್ನುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.


ಬಿತ್ತಿದ ಬೆಳೆ ಕಣ್ಣೆದುರಿಗೆ ಬಾಡುತ್ತಿದೆ ರೈತರ ಪರಿಸ್ಥಿತಿ ಇಷ್ಟು ಗಂಭಿರವಾಗಿದ್ದರು ಈಗಿನ ಸರ್ಕಾರ ರೈತರಿಗೆ ನೆರವಾಗಬೇಕು ಅದನ್ನು ಬಿಟ್ಟು ಸ್ವತಃ ಮುಖ್ಯಮಂತ್ರಿಗಳೇ “ರೈತರೆ ಬಿತ್ತನೆ ಮಾಡಬೇಡಿ” ಎಂದು ಹೇಳಿಕೆ ನೀಡಿರುವುದು ಬೇಸರದ ಸಂಗತಿ. ಕೂಡಲೇ ಸರ್ಕಾರ ಬರಗಾಲ ಘೋಷಣೆ ಮಾಡಿ ನಮ್ಮ ರೈತರಿಗೆ ಪರಿಹಾರ ನೀಡಬೇಕು.
ಭೀಮಣ್ಣ ಬಂಗಾರಬಂಡಿ ತಾಂಡದ
ರೈತ
