ದೇವದುರ್ಗ, ಜುಲೈ 11: ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಹೊನ್ನಕುಣಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಹಳೆಯ ಕಟ್ಟಡವನ್ನು ನಿಯಮಬಾಹಿರವಾಗಿ ಡೆಮಾಲಿಶ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಇದುವರೆಗೆ ಪ್ರಕರಣ ದಾಖಲಿಸದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಲ್ಲಿದವ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ದೂರಿನ ಪ್ರಕಾರ, ಸರ್ವೇ ನಂ. 54/1/2ರ ಪಹಣಿಯಲ್ಲಿ ಸದರಿ ಜಮೀನು ಕರ್ನಾಟಕ ಸರ್ಕಾರದ ಹೆಸರಿನಲ್ಲಿ ದಾಖಲಾಗಿದ್ದು, ಸುಮಾರು 40 ವರ್ಷಗಳ ಕಾಲ ಅಲ್ಲಿ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿತ್ತು. ನಂತರ ಹೊಸ ಕಟ್ಟಡ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಾಲೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

ಈ ನಡುವೆ, ಹಳೆಯ ಶಿಥಿಲಗೊಂಡ ಶಾಲೆಯ ಕಟ್ಟಡವನ್ನು ಕೆಲ ಖಾಸಗಿ ವ್ಯಕ್ತಿಗಳು ತಮ್ಮ ಜಮೀನು ಎಂದು ಹೇಳಿಕೊಂಡು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಸಂಜೆ ವೇಳೆ ಜೆಸಿಬಿ ಯಂತ್ರದ ಮೂಲಕ ಅನಧಿಕೃತವಾಗಿ ಡೆಮಾಲಿಶ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು 2026ರ ಜುಲೈ 1ರಂದು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ತಹಶೀಲ್ದಾರರು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಆರ್‌ಪಿ, ಆರ್‌ಐ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರೂ, ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ವಿಶ್ವನಾಥ್ ಬಲ್ಲಿದವ್ ದೂರಿನಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಮಸರಕಲ್ ಗ್ರಾಮ ಪಂಚಾಯಿತಿಯ ಪಿಡಿಒ ಅವರು ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ಸಂಗ್ರಹಿಸಿದ್ದು, ಆ ಸ್ಥಳದಲ್ಲಿ ಸರ್ಕಾರಿ ಶಾಲೆ ಇದ್ದದ್ದು ನಿಜ ಎಂದು ಗ್ರಾಮಸ್ಥರು ಸಹಿ ಮೂಲಕ ದೃಢಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ಆಸ್ತಿಯನ್ನು ಅನಧಿಕೃತವಾಗಿ ಡೆಮಾಲಿಶ್ ಮಾಡಿದ ಖಾಸಗಿ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಸ್ಥಳವನ್ನು ಸರ್ಕಾರದ ಆಸ್ತಿಯೆಂದು ಗುರುತಿಸಿ ಹದ್ದುಬಸ್ತು ಮಾಡಬೇಕು. ಜೊತೆಗೆ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ನಾಗರಾಜ್, ಪವನ್ ಕುಮಾರ್, ಬಸವರಾಜ್, ರಮೇಶ್ (ಹೊನ್ನಕುಣಿ), ಶಾಂತಕುಮಾರ್, ಕರಿಯಪ್ಪ, ರಂಗಣ್ಣ, ಆಂಜನೇಯ ಸೇರಿದಂತೆ ಹೊನ್ನಕುಣಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *