ಮಸ್ಕಿ: ಕರ್ನಾಟಕ ಪಬ್ಲಿಕ್ ಶಾಲೆ ಪಿಡಬ್ಲ್ಯೂಡಿ, ಮಸ್ಕಿ ಶಾಲೆಯಲ್ಲಿ ಬಿಸಿಯೂಟ ಯೋಜನೆಯಡಿ ನಡೆಯುತ್ತಿರುವ ಅಡುಗೆ ಸಹಾಯಕ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಆಯ್ಕೆ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಿರುವ ಮನವಿಯಲ್ಲಿ, ಸರ್ಕಾರದ ಮೀಸಲಾತಿ ನಿಯಮಗಳು ಹಾಗೂ ಅಕ್ಷರ ದಾಸೋಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸದೆ ಆಯ್ಕೆ ಸಮಿತಿಯು ತನ್ನ ಮನಬಂದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಮೀಸಲಾತಿಯಡಿ ಅಡುಗೆ ಸಹಾಯಕಿಯನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಖಾಲಿ ಇರುವ ಹುದ್ದೆಯನ್ನು ಪರಿಶಿಷ್ಟ ಪಂಗಡ ಮೀಸಲಾತಿಯಡಿ ಭರ್ತಿ ಮಾಡಬೇಕಾಗಿತ್ತು. ಆದರೆ ಅದನ್ನು ಪಾಲಿಸದೆ ಆಯ್ಕೆ ಪ್ರಕ್ರಿಯೆ ನಡೆಸಿರುವುದರಿಂದ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಮಹಾಸಭೆ ದೂರಿದೆ.
ಇದಲ್ಲದೆ, ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರು ನೇಮಕಾತಿಗೆ ನಿಗದಿಪಡಿಸಿರುವ ಕನಿಷ್ಠ ವಯೋಮಿತಿಯನ್ನು ಪೂರೈಸಿಲ್ಲ ಎಂಬ ಆರೋಪವೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಪ್ರಕಾರ ಹೊಸದಾಗಿ ಅರ್ಜಿ ಆಹ್ವಾನಿಸಿ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಮಹಾಸಭೆ ಆಗ್ರಹಿಸಿದೆ.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಯನ್ನು ನಿರ್ಲಕ್ಷಿಸಿದರೆ ಶಾಲೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ಆರ್.ಕೆ. ನಾಯಕ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *