ಜಾಲಹಳ್ಳಿ, ಜುಲೈ 8: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ತಾಲೂಕು ಘಟಕ, ದೇವದುರ್ಗ) ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ಸೂರು, ಭೂಮಿ, ರುದ್ರಭೂಮಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನೆಯ ಬಳಿಕ ಜಾಲಹಳ್ಳಿ ನಾಡಕಚೇರಿ ಮೂಲಕ ತಹಶೀಲ್ದಾರರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಬಡ ಹಾಗೂ ವಸತಿ ರಹಿತ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಆರೋಪಿಸಿದರು. ಸ್ವಂತ ಮನೆ ನಿರ್ಮಿಸಿಕೊಳ್ಳಲು ನಿವೇಶನವೂ ಇಲ್ಲ, ಸಾಗುವಳಿ ಮಾಡಲು ಭೂಮಿಯೂ ಇಲ್ಲದ ಕಾರಣ ಅನೇಕ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ ಎಂದು ತಿಳಿಸಿದರು.
ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ ಸಲ್ಲಿಸಲಾದ ನಮೂನೆ–57 ಅರ್ಜಿಗಳನ್ನು ಯಾವುದೇ ಸಮರ್ಪಕ ಕಾರಣವಿಲ್ಲದೆ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಅರ್ಜಿಗಳನ್ನು ಮರುಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಭೂ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರಮುಖ ಬೇಡಿಕೆಗಳು:
– ವಸತಿ ರಹಿತ ಕುಟುಂಬಗಳಿಗೆ ಕನಿಷ್ಠ 30×40 ಅಳತೆಯ ನಿವೇಶನ ವಿತರಿಸಲು ಸರ್ಕಾರಿ ಭೂಮಿ ಗುರುತಿಸಬೇಕು. ಅಗತ್ಯವಿದ್ದಲ್ಲಿ ಖಾಸಗಿ ಭೂಮಿ ಖರೀದಿಸಿ ಹಂಚಿಕೆ ಮಾಡಬೇಕು.
– ಚಿಂಚೋಡಿ ಗ್ರಾಮದ ಸರ್ವೆ ನಂ.123ರ 27.23 ಎಕರೆ ಭೂಮಿಯನ್ನು ವಸತಿಗಾಗಿ ಮಂಜೂರು ಮಾಡಿ, ಹೊಸೂರುಸಿದ್ಧಾಪುರ ಹಾಗೂ ಚಿಂಚೋಡಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಭೂಮಿಗೆ ಹದ್ದುಬಸ್ತು ನಡೆಸಬೇಕು.
– ಜಾಲಹಳ್ಳಿ–ದೇವದುರ್ಗ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಗೂರು ಹಾಗೂ ಹೇರುಂಡಿ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಬುಂಕಲದೊಡ್ಡಿ ಸರ್ಕಾರಿ ಪ್ರೌಢಶಾಲೆಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
– ವೀರಗೋಟ ಪುನರ್ವಸತಿ ಗ್ರಾಮದ ದಲಿತ ಕಾಲೋನಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸಿ, ರುದ್ರಭೂಮಿಗೆ ಜಾಗ ಮಂಜೂರು ಮಾಡಬೇಕು.
– ಲಿಂಗದಹಳ್ಳಿ ಪುನರ್ವಸತಿ ಗ್ರಾಮಕ್ಕೆ “ದೇಸಾಯಿ ನಗರ” ಅಥವಾ “ದೇಸಾಯಿ ಕ್ಯಾಂಪ್” ಎಂದು ಮರುನಾಮಕರಣ ಮಾಡಬೇಕು.
– ಬಾಗೂರು ಗ್ರಾಮದಲ್ಲಿ 10 ಎಕರೆ ಹಾಗೂ ಬುಂಕಲದೊಡ್ಡಿ ಗ್ರಾಮದಲ್ಲಿ 20 ಎಕರೆ ಜಮೀನನ್ನು ವಸತಿ ರಹಿತರಿಗೆ ಮೀಸಲಿಡಬೇಕು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರಗಲ್ ಮಾತನಾಡಿ, “ಮುಂದಿನ 30 ದಿನಗಳೊಳಗೆ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಆಗಸ್ಟ್ 15, 2026ರಂದು ತಾಲೂಕು ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ಶಿವಪ್ಪ ಪಲಕನಮರಡಿ, ಶಿವರಾಜ್ ಕೋರಿ ಗಣಜಲಿ, ಯೇಸು ಮಸರಕಲ್, ಹೈದರ್ ಅಲಿ ಪಲಕನಮರಡಿ, ಭೀಮಣ್ಣ ವೀರಗೋಟ, ಸಾಬಣ್ಣ ಕಮಲದಿನ್ನಿ, ಬೂದೆಪ್ಪ ಮ್ಯಾತ್ರಿ ಗಬೂರು, ಬಾಳಪ್ಪ ಜಾಲಹಳ್ಳಿ, ರಮೇಶ್ ಬಾಗೂರು, ಹನುಮಂತ್ರಾಯ ನಾಯಕ್, ರಂಗಪ್ಪ ನಾಯಕ್, ತಿಮ್ಮನಗೌಡ ಪೊಲೀಸ್ ಪಾಟೀಲ್, ಹುಲ್ಲೇಶ್ ಕಾಕರಗಲ್, ರಮೇಶ್ ಬಾವಿಮನಿ, ನಾಗರಾಜ್ ಬೇರಿ ಅರಕೇರ, ಚೆನ್ನಮ್ಮ ಅರಕೇರ, ಶ್ರೀಮತಿ ಪಾರ್ವತಿ ಬಾಗೂರು, ನಾಗಮ್ಮ ಕ್ಯಾದಿಗೆರ, ಬಸವರಾಜ್ ಹುಲಿಗುಡ್ಡ, ರವಿಕುಮಾರ್, ಶಿವಪ್ಪ ಕಂಪೂರ್, ಎಲ್ಲಪ್ಪ ಮಲದಕಲ್, ಆಂಜನೇಯ ಅರಕೇರ, ಸಲೀಂ ಅರಕೇರ, ದಲಿತ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿಭಟನೆ ಸ್ಥಳಕ್ಕೆ ದೇವದುರ್ಗ ವೃತ್ತ ನಿರೀಕ್ಷಕರಾದ ಪುಂಡಲಿಕ್ ಸಾಹೇಬರು ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

