ಮಸ್ಕಿ: ಪಟ್ಟಣದ ವಾರದ ಸಂತೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದ್ದಾರೆ.
ಮಸ್ಕಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿ ವಾರದ ಸಂತೆಗೆ ಸುಮಾರು 5,000 ರಿಂದ 6,000 ಜನರು ವ್ಯಾಪಾರ-ವಹಿವಾಟು ಹಾಗೂ ದಿನಸಿ, ಧಾನ್ಯ ಮತ್ತು ತರಕಾರಿ ಖರೀದಿಗಾಗಿ ಆಗಮಿಸುತ್ತಾರೆ. ಈ ವೇಳೆ ಸಂತೆ ಬಜಾರ್, ಹರಾಜು ಮೈದಾನ ಹಾಗೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಮತ್ತು ಕರುಗಳು ಗುಂಪುಗುಂಪಾಗಿ ಸಂಚರಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಾನುವಾರುಗಳ ಮಾಲೀಕರು ತಮ್ಮ ದನ ಹಾಗೂ ಕರುಗಳನ್ನು ಸಾರ್ವಜನಿಕ ರಸ್ತೆ ಮತ್ತು ಸಂತೆ ಪ್ರದೇಶಗಳಲ್ಲಿ ಬಿಡದಂತೆ ಪುರಸಭೆ ಮನವಿ ಮಾಡಿದೆ. ಸೂಚನೆ ಪಾಲಿಸದಿದ್ದಲ್ಲಿ ಕೆಲವೇ ದಿನಗಳಲ್ಲಿ ಬಿಡಾಡಿ ದನ ಹಾಗೂ ಕರುಗಳನ್ನು ವಶಪಡಿಸಿಕೊಂಡು ರಾಯಚೂರು ಜಿಲ್ಲೆಯ ಆಲೂರು ತಾಲೂಕಿನ ಜ್ಯೋತಿರ್ಲಿಂಗೇಶ್ವರ ಗೋಶಾಲೆಗೆ ಸಾಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಜಾನುವಾರುಗಳ ಮಾಲೀಕರು ಪುರಸಭೆಯ ಸೂಚನೆಗೆ ಸಹಕರಿಸುವಂತೆ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
