ಜಾಲಹಳ್ಳಿ, ಜುಲೈ 7: ಸಮೀಪದ ಲಿಂಗದಹಳ್ಳಿ ಗ್ರಾಮದ ಪಂಪ್‌ಸೆಟ್ ರೈತರಿಗೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಬೇಕು. ಇಲ್ಲದಿದ್ದರೆ ಕರ್ನಾಟಕ ಪ್ರಾಂತ ರೈತ ಸಂಘಟನೆ, ಲಿಂಗದಹಳ್ಳಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಮಾನಪ್ಪ ಬಿರಾದರ ಎಚ್ಚರಿಕೆ ನೀಡಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ದಿನಕ್ಕೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರೂ, ವಾಸ್ತವದಲ್ಲಿ ಕೇವಲ 2–3 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಬಳಿಕ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ರೈತರು ರಾತ್ರಿ ಪೂರ್ತಿ ಹೊಲಗಳಲ್ಲಿ ಜಾಗರಣೆ ಮಾಡಿ ವಿದ್ಯುತ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಟಿ ಕಾರ್ಯಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಲಿದೆ. ಆದ್ದರಿಂದ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ರೈತರಿಗೆ ನಿರಂತರ ಹಾಗೂ ನಿಗದಿತ ಅವಧಿಯ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಕಾರ್ಯದರ್ಶಿ ದುರುಗಪ್ಪ ನಾಯಕ ಮಾತನಾಡಿ, ನಾಟಿ ಅವಧಿಯಲ್ಲಿ ನಿಗದಿತ 7 ಗಂಟೆಗಳಿಗಿಂತ ಹೆಚ್ಚುವರಿಯಾಗಿ ವಿದ್ಯುತ್ ಪೂರೈಕೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಖಜಾಂಚಿ ಶಿವಾನಂದ, ಬಸವರಾಜ, ಅಂಬ್ರೇಶ್ ಪಾಟೀಲ್, ಮಂಜುನಾಥ ಬಿರಾದರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

