ಮಳೆ ಕೊರತೆಯಿಂದ ಮುಂಗಾರು ಬೆಳೆ ಒಣಗುವ ಆತಂಕ – ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹ
ಕುಷ್ಟಗಿ:ತಾಲೂಕಿನಾದ್ಯಂತ ಮುಂಗಾರು ಮಳೆಯನ್ನು ನಂಬಿಕೊಂಡು ಕೃಷಿ ಆರಂಭಿಸಿದ ರೈತರು ಇದೀಗ ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಲಾಲಿ ಅಂಗಡಿಗಳಿಂದ ಸಾಲ ಪಡೆದು, ಟ್ರ್ಯಾಕ್ಟರ್ ಹಾಗೂ ಎತ್ತುಗಳ ಮೂಲಕ ಭೂಮಿಯನ್ನು ಹದಗೊಳಿಸಿ, ಕಳೆದ ತಿಂಗಳು ಸುರಿದ ಅಲ್ಪಸ್ವಲ್ಪ ಮಳೆಯನ್ನು ನಂಬಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆಗಳು ಒಣಗುತ್ತಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ.
ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯೊಂದಿಗೆ ಬಿತ್ತನೆ ಮಾಡಿದ ಬೆಳೆಗಳು ಮಳೆ ಕೊರತೆಯಿಂದ ಬಾಡುತ್ತಿದ್ದು, ರೈತರ ಮುಖದಲ್ಲಿ ಕಳೆ ತಪ್ಪಿದೆ. ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡರೂ ಮಳೆ ಸುರಿಯದೆ ಕರಗುತ್ತಿರುವುದು ಬರಗಾಲದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹವಾಮಾನ ತಜ್ಞರ ಮುನ್ಸೂಚನೆಯೂ ಮಳೆ ಕೊರತೆಯ ಸಾಧ್ಯತೆಯನ್ನು ಸೂಚಿಸಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.
ಕೂಲಿ ಮಾಡಿ ಬದುಕು ಸಾಗಿಸುವ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬೆಳೆ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ, ಮೋಡ ಬಿತ್ತನೆ ಸೇರಿದಂತೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಲೆಂದು ರೈತರು, ಯುವಕರು ಹಾಗೂ ವಿವಿಧ ಸಂಘಟನೆಗಳು ವಿಶೇಷ ಪೂಜೆ, ಭಜನೆ ಮತ್ತು ಸಂಪ್ರದಾಯಬದ್ಧ ಆಚರಣೆಗಳ ಮೂಲಕ ವರುಣ ದೇವರ ಮೊರೆ ಹೋಗುತ್ತಿದ್ದಾರೆ.
“ಇನ್ನಾದರೂ ರಾಜ್ಯದಾದ್ಯಂತ ಉತ್ತಮ ಮಳೆ ಸುರಿದು ಭೂಮಿ ತಂಪಾಗಿ, ಬೆಳೆಗಳು ಸಮೃದ್ಧವಾಗಿ ಬೆಳೆಯಲಿ. ಸಂಕಷ್ಟದಲ್ಲಿರುವ ರೈತ ಕುಟುಂಬಗಳು ಆರ್ಥಿಕವಾಗಿ ಚೇತರಿಸಿಕೊಳ್ಳುವಂತಾಗಲಿ” ಎಂಬುದು ರೈತ ಬಸವರಾಜ ಜಿಗೇರಿ ಕಡೇಕೊಪ್ಪ ಹಾಗೂ ಸಾರ್ವಜನಿಕರ ಆಶಯವಾಗಿದೆ.

Leave a Reply

Your email address will not be published. Required fields are marked *