ರಾಯಚೂರು,ಜು,07: ಸಾಮಾನ್ಯವಾಗಿ ಕ್ಯಾನ್ಸರ್‌ ಎಂಬ ಶಬ್ಧವೇ ಒಂದು ರೀತಿಯಲ್ಲಿ ಭಯ, ಆತಂಕ ಹುಟ್ಟಿಸುತ್ತದೆ, ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್‌‌ ಅತ್ಯಂತ ಮಾರಕವಾಗಿದ್ದು,  ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌‌ನಿಂದ ಮುಕ್ತಗೊಳಿಸಲು ನೆಮ್ಮದಿಯ ಜೀವನ ನಡೆಸಲು ಪ್ರಸ್ತುತ 14 ವರ್ಷದ ಹೆಣ್ಣು ಮಕ್ಕಳಿಗೆ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ  ಹಾಕಲಾಗುವ ಹೆಚ್.ಪಿ.ವಿ ಲಸಿಕೆಯನ್ನು ಪಾಲಕರು ಯಾವುದೆ ಹಿಂದೇಟು ಹಾಕದೆ ಹಾಕಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆ‌ರ್‌ಸಿಹೆಚ್‌ ಅಧಿಕಾರಿ ಡಾ ನಂದಿತಾ ಎಮ್‌ ಎನ್‌ ತಿಳಿಸಿದರು.
       ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ನಗರದ ಬೊಳಮಾನದೊಡ್ಡಿಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಜಾಗೃತಿ ನೀಡಿ 36 ಮಕ್ಕಳು ಲಸಿಕೆ ಪಡೆದ ನಂತರ ಮಾತನಾಡುತ್ತಾ, ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದ್ದು, ಜಿಲ್ಲೆಯಾದ್ಯಂತ ಹಾಕಲಾಗುತ್ತಿದ್ದು, ಈಗಾಗಲೆ ರಾಯಚೂರು ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶೇಕಡ 60% ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಲಾಗಿದೆ. ಪಾಲಕರು ಸ್ವಯಂ ಮುಂದೆ ಬಂದು ಹಾಕಿಸುತ್ತಿದ್ದಾರೆ. ಕೆಲವರು
ಸಾಮಾಜಿಕ ಜಾಲತಾಣಗಳಲ್ಲಿ    ಲಸಿಕೆ ಬಗ್ಗೆ ತಪ್ಪುಮಾಹಿತಿ ನೀಡಿದ್ದು ಕಂಡು ಬಂದಿದೆ.  ಸಾರ್ವಜನಿಕರು ಯಾವುದೇ ತಪ್ಪು ಮಾಹಿತಿಗೆ ಕಿವಿಗೊಡದೆ  ಭವಿಷ್ಯದ ದೃಷ್ಟಿಯಿಂದ ತಮ್ಮ ಕುಟುಂಬದ 14 ವರ್ಷದ ಹೆಣ್ಣು ಮಗಳಿಗೆ ಉಚಿತವಾಗಿ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆ ತಪ್ಪದೆ ಹಾಕಿಸಿ. ಇದಕ್ಕಾಗಿ ಎಲ್ಲ ಸತಕಾರಿ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪೋಷಕರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಚಿತವಾಗಿ ಲಸಿಕೆ ಹಾಕಿಸಲು ಕೋರಿದರು.
 ಗರ್ಭಕಂಠದ ಕ್ಯಾನ್ಸರ್‌‌ ಉಂಟಾಗುವ ಕಾರಣಗಳು:
ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಕ್ಯಾನ್ಸರ್ ಆಗಿ ಬದಲಾವಣೆಯಾಗುತ್ತದೆ.
ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ ಎಂದರು.
        ಈ ಸಂದರ್ಭದಲ್ಲಿ
ಹರಿಜನವಾಡಾ ಯುಪಿಹೆಚ್‌ಸಿಯ ವೈದ್ಯಾಧಿಕಾರಿ ಡಾ ಸುನೀಲ್,
ಜಹೀರಬಾದ್‌ ಯುಪಿಹೆಚ್‌ಸಿಯ ವೈದ್ಯಾಧಿಕಾರಿ ಡಾ ಶ್ವೇತಾಂಬರಿ,  ಪ್ರಾಂಶುಪಾಲರಾದ  ನಾಜೀಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ನಿಲಯಪಾಲಕರಾದ ರೇವಣ ಸಿದ್ದಪ್ಪ, ಶುಶ್ರೂಷಣಾಧಿಕಾರಿ ಹುಸ್ನಾ ಬೇಗಂ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ ಸೇರಿದಂತೆ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *